ತುಮಕೂರು: ಬಿಎಸ್ಪಿ ಪಕ್ಷ ರಾಜ್ಯದಲ್ಲಿ ವೇಗ ಪಡೆದುಕೊಳ್ಳುತ್ತಿದೆ. ಪಕ್ಷದಿಂದ ಹಲವು ಜನಪರ ಹೋರಾಟ ಮಾಡಿದ್ದೇವೆ. ಸಂವಿಧಾನದ ಬಗ್ಗೆ ಅರಿವು ಮೂಡಿಸಿದ್ದೇವೆ. ಸರ್ಕಾರದ ಧೋರಣೆಗಳನ್ನು ಖಂಡಿಸಿ ಹೋರಾಟ ನಡೆಸಿದ್ದೇವೆ. ನಮ್ಮ ಪಕ್ಷ ಎಲ್ಲಾ ವರ್ಗದ ಪರ ಕೆಲಸ ಮಾಡಲಿದೆ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಗೋಪಿನಾಥ್ ತಿಳಿಸಿದರು.
ತುಮಕೂರಿನಲ್ಲಿ ವಿವಿಧ ಮುಖಂಡ ಪಕ್ಷ ಸೇರ್ಪಡೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಹಲವು ನಾಯಕರು, ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಬರುವವರಿಗೆ ನಾವು ಮುಕ್ತ ಅವಕಾಶ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಉನ್ನತ ಜವಾಬ್ದಾರಿ ಸಹ ನೀಡಲಾಗುವುದು ಎಂದರು.
ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಬಿಎಸ್ಪಿ ಪಕ್ಷ ಕೂಡ ಸ್ಪರ್ಧೆಗೆ ಸಿದ್ಧತೆ ನಡೆಸಿದೆ. ರಾಜ್ಯದ ಹಲವು ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿ ಗಳು ಕಣಕ್ಕಿಳಿಯಲಿದ್ದಾರೆ. ತುಮಕೂರು ಜಿಲ್ಲೆಯಲ್ಲೂ ಪಕ್ಷ ಬಲವರ್ಧನೆ ಆಗುತ್ತಿದೆ. ಜಿಲ್ಲೆಯ 11 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಮಧುಗಿರಿಯಲ್ಲಿ ಮುಖಂಡ ಮಧು ಸ್ಪರ್ಧೆ ಮಾಡಲಿದ್ದಾರೆ. ಚಿ.ನಾ.ಹಳ್ಳಿಯಲ್ಲಿ ಧನಂಜಯ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಹಲವು ಆಕಾಂಕ್ಷಿಗಳಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಸಲಾಗುವುದು ಎಂದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಜನರು ತಿರಸ್ಕರಿಸಿ ಈ ಬಾರಿ ಬಿಎಸ್ಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ. ಬಿಜೆಪಿ ಡೇಂಜರ್ ಪಕ್ಷ, ಕಾಂಗ್ರೆಸ್ ಇದರ ಇನ್ನೊಂದು ಮುಖ ಎಂದು ವಾಗ್ದಾಳಿ ನಡೆಸಿದರು.
ಮಧುಗಿರಿ ಕ್ಷೇತ್ರದ ಅಭ್ಯರ್ಥಿ ಮಧು ಮಾತನಾಡಿ, ಮಧುಗಿರಿಯಲ್ಲಿ ಎದುರಾಳಿಗಳನ್ನು ಎದುರಿಸಲು ಶಕ್ತರಾಗಿದ್ದೇವೆ. ಜನರ ವಿಶ್ವಾಸ ಗಳಿಸಿ ಮಧುಗಿರಿ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿ ಯಾಗಿ ಗೆಲುವು ಸಾಧಿಸಲಿದ್ದೇವೆ ಎಂದರು.
ಮಧುಗಿರಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದು ನನ್ನ ಗುರಿ. ಈ ಉದ್ದೇಶದಿಂದ ನಾನು ಮಧುಗಿಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ರಾಜಸಿಂಹ, ಮುಖಂಡರಾದ ಮುನಿಯಪ್ಪ, ನಾಗೇಂದ್ರ, ಹನುಮಂತರಾಯಪ್ಪ, ರುದ್ರಪ್ಪ, ರಂಗಧಾಮಯ್ಯ, ಸೂಲಯ್ಯ, ರಂಗಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
Comments are closed.