ಕುಣಿಗಲ್: ಪಟ್ಟಣದ 18ನೇ ವಾರ್ಡ್ನಲ್ಲಿ ಪುರಸಭೆಯ ಜೆಡಿಎಸ್ ಸದಸ್ಯ ಶ್ರೀನಿವಾಸ್ ನೀಡಿದ್ದ ಕಾಮಗಾರಿ ಪಟ್ಟಿಯಂತೆ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಸದಸ್ಯ, ಶಾಸಕರು ಗುದ್ದಲಿ ಪೂಜೆಗೆ ಆಗಮಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ್ದು ಕಾಂಗ್ರೆಸ್ ನ ಮುಖಂಡರೊಂದಿಗೆ ಶಾಸಕರ ಮುಂದೆಯೆ ಜಟಾಪಟಿಗೆ ಇಳಿದು ವಾಗ್ವಾದ ನಡೆಸಿದರು.
ನಗರೋತ್ಥಾನ ಯೋಜನೆಯಡಿ ನಾಲ್ಕು ಕೋಟಿ ವೆಚ್ಚದಲ್ಲಿ ಕಾಮಗಾರಿಗಳ ಆರಂಭಕ್ಕೆ 18ನೇ ವಾರ್ಡ್ನ ಸದಸ್ಯ ಜೆಡಿಎಸ್ ನ ಶ್ರೀನಿವಾಸ್ ಪಟ್ಟಿ ನೀಡಿದ್ದರು. ಅದರಂತೆ ಅಧಿಕಾರಿಗಳು ಅನುಮೋದನೆ ಆಗಿದೆ ಎಂದಿದ್ದರು. ಬುಧವಾರ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆಸಿದಾಗ ಸದಸ್ಯ ಶ್ರೀನಿವಾಸ್ ನೀಡಿದ್ದ ಪಟ್ಟಿಯಂತೆ ಕಾಮಗಾರಿ ಆಗದೆ ಬೇರೆಡೆ ಕಾಮಗಾರಿಗೆ ಅನುಮೋದನೆ ಆಗಿತ್ತು. ಶಾಸಕ ಡಾ.ರಂಗನಾಥ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಬಂದಾಗ ಸದಸ್ಯ ಶ್ರೀನಿವಾಸ್ ತಾವೊಬ್ಬ ಜನಪ್ರತಿನಿಧಿಯಾಗಿದ್ದು ನನಗೆ ಅನ್ಯಾಯ ಮಾಡಲಾಗಿದೆ. ಇಲ್ಲಿ ಗುದ್ದಲಿ ಪೂಜೆ ಮಾಡಬೇಡಿ ಎಂದು ಆಕ್ಷೇಪಿಸಿದರು. ಈವೇಳೆ ಪುರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಪಾಪಣ್ಣ, ಸದಸ್ಯರೊಂದಿಗೆ ವಾಗ್ವಾದಕ್ಕೆ ಇಳಿದರು.
ಶಾಸಕರ ಮುಂದೆಯೆ ಕಾಂಗ್ರೆಸ್ ಮುಖಂಡನ ವರ್ತನೆ ಖಂಡಿಸಿದ ಸದಸ್ಯ ಶ್ರೀನಿವಾಸ್ ವಾಗ್ವಾದಕ್ಕೆ ಇಳಿದರು. ಶಾಸಕರು ಸಮಧಾನಗೊಳಿಸಿದರೂ ಸಮಧಾನಗೊಳ್ಳದ ಇಬ್ಬರೂ ಪರಸ್ಪರ ವೈಯಕ್ತಿಕ ನಿಂದನೆಗೆ ಇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕರು, ಪುರಸಭೆ ಸದಸ್ಯ ಶ್ರೀನಿವಾಸ್ ಅವರನ್ನು ಸಮಾಧಾನಗೊಳಿಸಿ ಹೆಚ್ಚುವರಿ ಐದು ಲಕ್ಷ ರೂ. ಅನುದಾನ ತಾವೇ ಹಾಕಿಸುವುದಾಗಿ ಒಂದು ವೇಳೆ ಆಗದೆ ಇದ್ದಲ್ಲಿ ಸ್ವಂತ ಹಣ ನೀಡುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿ ಗುದ್ದಲಿ ಪೂಜೆ ನೆರವೇರಿಸಿದರು.
Comments are closed.