ತುಮಕೂರು: ತಿಪಟೂರು ತಾಲ್ಲೂಕು ನೊಣವಿನಕೆರೆ ಹೋಬಳಿ ರಂಗನಹಳ್ಳಿಯಲ್ಲಿ ಈ ತಿಂಗಳ 8ರಿಂದ 11ರ ವರೆಗೆ ಶನೈಶ್ಚರ ಸ್ವಾಮಿ, ಆಂಜನೇಯ ಸ್ವಾಮಿ, ದುರ್ಗಾ ಪರಮೇಶ್ವರಿ ದೇವಿ, ಕಾಳಿಕಾ ದೇವಿಯವರ 19ನೇ ವರ್ಷದ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ.
ಶ್ರೀಶನೈಶ್ಚರ ಸ್ವಾಮಿ ಸೇವಾ ಸಮಿತಿ ಮುಖಂಡ ಕೆ.ಎನ್.ಮಂಜುನಾಥ್, ಬಾಣಾವರ ಉಮೇಶ್ ಹಾಗೂ ಇತರರು ತುಮಕೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಜಾತ್ರೆ ಪ್ರಯುಕ್ತ ವಿವಿಧ ಪೂಜಾ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀ ಶನೈಶ್ಚರ ಸ್ವಾಮಿಗೆ ಪ್ರಥಮ ಬಾರಿಗೆ ಬ್ರಹ್ಮ ಕಳಸಾಭಿಷೇಕ ಏರ್ಪಡಿಸಲಾಗಿದೆ. ಲೋಕ ಕಲ್ಯಾಣಾರ್ಥ ಬ್ರಹ್ಮ ಕಪಾಲಿಕರ ಸಮ್ಮುಖದಲ್ಲಿ ಅಗ್ನಿಜಾಲ ಮಂತ್ರಪೂರ್ವಕ ಪ್ರಚಂಡ ಭೈರವಾದಿ ದಿಕ್ಪಾಲಕ ಸಹಿತ ರೌರವ ರುದ್ರ ಅಖಂಡ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ 9 ರಂದು ಬೆಳಗ್ಗೆ ವಿವಿಧ ಪೂಜಾ ಕಾರ್ಯಕ್ರಮ ನಡೆದು ನಂತರ ಮಂಗಳ ವಾದ್ಯ ಹಾಗೂ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಶನೈಶ್ಚರ ಸ್ವಾಮಿಯ ಅದ್ದೂರಿ ಗ್ರಾಮೋತ್ಸವ ವ್ಯವಸ್ಥೆಯಾಗಿದೆ. ಆಲ್ಬೂರು, ಅಣಪನಹಳ್ಳಿ, ಯಾದವರ ಹಟ್ಟಿ, ಬಸವನಹಳ್ಳಿ, ರಂಗನಹಳ್ಳಿ, ಜನತಾ ಕಾಲೋನಿ, ಭೋವಿ ಕಾಲೋನಿ, ಮಾಕನಹಳ್ಳಿ, ಪಿಚ್ಚೇನಹಳ್ಳಿ, ನೊಣವಿನಕೆರೆ, ಕಾಡಸಿದ್ದೇಶ್ವರ ಮಠದಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
11 ರಂದು ಶನೈಶ್ಚರ ಸ್ವಾಮಿಗೆ ಬ್ರಹ್ಮ ಕಳಸಾಭಿಷೇಕ ನಂತರ ಕೆರಗೋಡಿ- ರಂಗಾಪುರ ಸುಕ್ಷೇತ್ರದ ಅಧ್ಯಕ್ಷರಾದ ಗುರು ಪರದೇಶಿ ಕೇಂದ್ರ ಸ್ವಾಮೀಜಿ ಅಮೃತ ಹಸ್ತದಿಂದ ಮಹಾ ಪೂರ್ಣಾಹುತಿ ಮತ್ತಿತರ ಪೂಜಾ ಕಾರ್ಯಕ್ರಮ ನೆರವೇರಲಿವೆ.
ಅಂದು ಮಧ್ಯಾಹ್ನ 12 ಗಂಟೆಗೆ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ, ಗುರು ಪರದೇಶಿ ಕೇಂದ್ರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಸಾರ್ವಜನಿಕ ಸಮಾರಂಭ ಏರ್ಪಾಟಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಧ್ಯಕ್ಷತೆಯ ಈ ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತಿತರ ರಾಜಕೀಯ ಮುಖಂಡರು ಭಾಗವಹಿಸುವರು.
ಇದರ ಅಂಗವಾಗಿ 11 ರಂದು ಬೆಳಗ್ಗೆ 10 ಗಂಟೆಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಹೆಸರಾಂತ ಕಲಾವಿದರಿಂದ ಹಾಸ್ಯ ಸಂಗಮ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮುಖಂಡರಾದ ನಂಜಪ್ಪ, ಡಿ.ಬಿ.ಮಂಜುನಾಥ್, ವಿ.ಬಿ.ಶ್ರೀಧರ್, ಪುಟ್ಟಸ್ವಾಮಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
Comments are closed.