ತುರುವೇಕೆರೆ: ತಾಲೂಕಿನ ಸಿದ್ದನಹಟ್ಟಿ ಸರಕಾರಿ ಶಾಲೆಯ ಶಿಕ್ಷಕಿಯ ಕರ್ತವ್ಯ ನಿರ್ಲಕ್ಷ್ಯ ಖಂಡಿಸಿ ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಮಕ್ಕಳೊಂದಿಗೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಶಿವರಾಜ್ ಮಾತನಾಡಿ, ನಮ್ಮೂರ ಶಾಲೆಯ ಶಿಕ್ಷಕಿ ಪ್ರೇಮಾ ಅವರು ಪದೇ ಪದೆ ಶಾಲೆಗೆ ಗೈರಾಗುತ್ತಿದ್ದಾರೆ. ಈ ಬಗ್ಗೆ ಸಿಆರ್ಪಿಯವರನ್ನು ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಬಿಇಓ ಅವರಿಗೆ ಈ ಬಗ್ಗೆ ದೂರಿತ್ತರೂ ಯಾವುದೇ ಕ್ರಮ ವಹಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿರುವ ಶಿಕ್ಷಕಿ ಹಾಗೂ ಸಿಆರ್ಪಿ ವಿರುದ್ಧ ಕ್ರಮ ಹಾಗೂ ಬೇರೆ ಶಿಕ್ಷಕರನ್ನು ನೇಮಕ ಮಾಡುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.
ಗ್ರಾಮದ ಮಹಿಳೆ ಗಿರಿಜಮ್ಮ ಮಾತನಾಡಿ, ನಿತ್ಯವೂ ಶಾಲೆಗೆ ಬಾರದ ಶಿಕ್ಷಕಿ ಪ್ರೇಮಾ ಅವರಿಗಾಗಿ ಮಕ್ಕಳು ಕಾದು ಕೂರುವಂತಾಗಿದೆ. ಕೆಲ ದಿನ ಮಧ್ಯಾಹ್ನವಾದರೂ ಶಾಲೆಯತ್ತ ಶಿಕ್ಷಕಿ ಬಾರದೇ ಮಕ್ಕಳು ಕಲಿಕೆಯಿಂದ ವಂಚಿತರಾಗಿ ಮನೆಗೆ ಹಿಂತಿರುಗುವಂತಾಗಿದೆ. ಮಕ್ಕಳು ಆಡುವ ಭರದಲ್ಲಿ ಶಾಲೆಗೆ ಹತ್ತಿರವಿರುವ ಕಟ್ಟೆಯತ್ತ ಹೋಗಿ ಮುಂದೆ ಆಗಬಹುದಾದ ಅನಾಹುತಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಪ್ರತಿಭಟನೆ ವಿಷಯ ತಿಳಿದ ಬಿಇಓ ಪದ್ಮನಾಭ್ ಎಸ್ಡಿಎಂಸಿ ಅಧ್ಯಕ್ಷರಿಗೆ ಫೋನ್ ಮಾಡಿ ಮನವಿ ಆಲಿಸಿದರು. ಆನಂತರ ಕರ್ತವ್ಯ ನಿರ್ಲಕ್ಷ್ಯ ಶಿಕ್ಷಕಿ ಹಾಗೂ ಉಡಾಫೆ ಉತ್ತರ ನೀಡುವ ಸಿಆರ್ಪಿ ವಿರುದ್ಧ ಶಿಸ್ತು ಕ್ರಮ ಹಾಗೂ ಶಾಲೆಗೆ ಹೊಸ ಶಿಕ್ಷಕರನ್ನು ನೇಮಿಸುವ ಭರವಸೆ ನೀಡುವ ಮೂಲಕ ಪ್ರತಿಭಟನೆಗೆ ತೆರೆ ಎಳೆದರು.
ಪ್ರತಿಭಟನೆಯಲ್ಲಿ ಪೋಷಕರಾದ ವೀರಣ್ಣ, ನಿಂಗರಾಜ್, ಹೇಮಲತಾ, ದಾಸಣ್ಣ, ಶಮಂತ, ನಿಶ್ಚಿತ, ಗಿರಿಜಮ್ಮ, ಸೌಭಾಗ್ಯ, ಗೌರಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Comments are closed.