ಪತ್ರಕರ್ತನಿಗೆ ಸಂಶೋಧನೆ, ಗ್ರಹಿಕೆ ಅತ್ಯಗತ್ಯ

ಭಾಷೆ, ಸೃಜನಶೀಲತೆಗೆ ಡಿಜಿಟಲ್ ಯುಗ ತೊಡಕಾಗಬಾರದು

200

Get real time updates directly on you device, subscribe now.


ತುಮಕೂರು: ಭಾಷೆ, ಬರೆವಣಿಗೆ, ಸೃಜನಶೀಲತೆಗೆ ಡಿಜಿಟಲ್ಯುಗ ತೊಡಕಾಗಬಾರದು. ಪತ್ರಕರ್ತ ಆಗುವವನಿಗೆ ತೆರೆದ ಕಣ್ಣುಗಳಿರಬೇಕು. ಸುದ್ದಿಯ ಆಳ ಅಗಲವನ್ನು ಸಂಶೋಧನೆ, ಗ್ರಹಿಕೆ, ಪ್ರಸ್ತುತಿಯ ಮುಖೇನ ಓದುಗರಿಗೆ ಉಣ ಬಡಿಸುವವನೇ ನಿಜವಾದ ಪತ್ರಕರ್ತಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.

ತುಮಕೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಗುರುವಾರ ಆಯೋಜಿಸಿದ್ದ ನೂತನ ಸ್ಟುಡಿಯೋ ಮತ್ತು ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿ ಡಿಜಿಟಲ್ ಕಾಲದಲ್ಲಿ ಭಾಷೆ-ಬರೆವಣಿಗೆಯ ಪ್ರಾಮುಖ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪಸ್ತುತ ವಿವಿಗಳಲ್ಲಿ ಪತ್ರಿಕೋದ್ಯಮ ವಿಭಾಗಗಳು ಪ್ರತಿಭಾವಂತ ಪತ್ರಕರ್ತರನ್ನು ಹೆರುವ ಸ್ಥಿತಿಯಲ್ಲಿಲ್ಲ. ಪತ್ರಿಕೋದ್ಯಮದಲ್ಲೇ ಬದುಕು ಕಟ್ಟಿಕೊಳ್ಳುವ ಹಠ, ಛಲ ಇರುವ ಸರ್ವಾಸಕ್ತರನ್ನು ತರಗತಿಗಳು ಉತ್ತಮ ಮಟ್ಟಕ್ಕೆ ಏರಿಸಬಹುದೆ ಹೊರತು ಪತ್ರಿಕೋದ್ಯಮದ ಹಸಿವಿಲ್ಲದವರನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದು ಪ್ರಯೋಜನವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿಶ್ವ ವಿದ್ಯಾಲಯಗಳಲ್ಲೇ ಸಂಸ್ಥೆಯಾಗಿ ತಯಾರಾಗಿ ಹೋಗುವ ಯುವ ಪತ್ರಕರ್ತರೇ ಸಮಾಜದ ಬದಲಾವಣೆಗಾಗಿ ಶ್ರಮಿಸುವರು. ಪತ್ರಿಕೋದ್ಯಮ ವಿಭಾಗ ಬಲಿಷ್ಠವಾಗಿದ್ದಾಗ ಸಮಾಜದ ಯಾವುದೇ ದುಷ್ಟ ಶಕ್ತಿಯೂ ಪ್ರಭಾವಿಸುವುದಿಲ್ಲ. ಈಗಿನ ಡಿಜಿಟಲ್ ಯಾತ್ರೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲಿನ ಎಲ್ಲಾ ವಿಭಾಗಗಳು ನಮ್ಮ ಆಸ್ತಿ, ಮೂಲ ಸೌಕರ್ಯ ಒದಗಿಸಿ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವುದು ವಿವಿಯ ಜವಾಬ್ದಾರಿಯಾಗಿರುತ್ತದೆ ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ಜಮ್ ಮಾತನಾಡಿ, ಸಮಾಜದ ಕನ್ನಡಿಯಾದ ಪತ್ರಿಕೋದ್ಯಮ ನಿಷ್ಪಕ್ಷಪಾತವಾಗಿರಬೇಕು. ಒಬ್ಬ ನಿಜವಾದ ಪತ್ರಕರ್ತನಲ್ಲಿ ನಿಖರತೆ, ಪ್ರಾಮಾಣಿಕತೆ, ಧೈರ್ಯ ಇರಬೇಕು. ಮಾಧ್ಯಮದ ವಿದ್ಯಾರ್ಥಿಗಳು ವೃತ್ತಿಧರ್ಮ ಮತ್ತು ನೈತಿಕತೆ ಕರಗತ ಮಾಡಿಕೊಳ್ಳಬೇಕು ಎಂದರು.

ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ.ಪದ್ಮನಾಭ ಕೆ.ವಿ. ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಅತ್ಯಂತ ಸೃಜನಶೀಲರಾಗಿ ಹೊರ ಹೊಮ್ಮುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ನಾನಾ ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವುದು, ವಿದೇಶಗಳಲ್ಲಿ ಉನ್ನತ ಶಿಕ್ಷಣ ಮುಂದುವರೆಸಿರುವುದು ವಿವಿ ಮತ್ತು ವಿಭಾಗದ ಘನತೆ ಹೆಚ್ಚಿಸುವಂಥದ್ದು, ತಮ್ಮ ಕೆಲಸ ಮತ್ತು ಕ್ರಿಯಾಶೀಲತೆಯ ಮೂಲಕ ವಿಭಾಗಕ್ಕೆ ಹೆಚ್ಚಿನ ಅಗತ್ಯ ಸೌಕರ್ಯ ದೊರಕುವಂತೆ ಮಾಡುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದರು.

ಟಿಯು ಟಿವಿ ವಾರ್ತಾ ಸಂಚಿಕೆ ಹಾಗೂ ಕಲ್ಪತರು ಟೈಮ್ಸ್ ಪತ್ರಿಕೆಯನ್ನು ಈ ಸಂದರ್ಭ ಅನಾವರಣ ಗೊಳಿಸಲಾಯಿತು ಹಾಗೂ ಅತಿಥಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರಾದ ಡಾ.ಪೃಥ್ವಿರಾಜ.ಟಿ, ವಿನಯ್ಕುಮಾರ್.ಎಸ್.ಎಸ್, ಕೋಕಿಲ.ಎಂ.ಎಸ್, ತಾಂತ್ರಿಕ ಸಹಾಯಕ ಅಭಿಷೇಕ್.ಎಂ.ವಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!