ಕುಣಿಗಲ್: ಡಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮಗಳನ್ನು ತಾಪಂ ಇಒ ಮುಂದೆ ಸಮರ್ಥಿಸಿಕೊಳ್ಳಲು ಹೋದ ಪಿಡಿಒ ಅವರಿಗೆ ಗ್ರಾಮಸ್ಥರು ಛೀಮಾರಿ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲೂಕಿನ ಡಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗ ಮತ್ತು 15ನೇ ಹಣಕಾಸು ಯೋಜನೆ ಯಡಿಯಲ್ಲಿ ಹಲವು ಅಕ್ರಮ ನಡೆಸಿದ್ದು ಕಾಮಗಾರಿ ಮಾಡದೆಯೆ ಬಿಲ್ ಪಡೆಯಲಾಗಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳ ತನಿಖೆಗೆ ಗುರುವಾರ ತಾಪಂ ಇಒ ಜೋಸೆಫ್ ಸಿಬ್ಬಂದಿಯೊಂದಿಗೆ ತೆರಳಿದ್ದರು. ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳಲ್ಲಿ ಕೆಲಸ ಮಾಡದೆ ಬಿಲ್ ಮಾಡಲಾಗಿದೆ ಎಂದು ಗ್ರಾಪಂ ಸದಸ್ಯ ಕೃಷ್ಣೇಗೌಡ, ಮಾಜಿ ಸದಸ್ಯರಾದ ಶಶಿಧರ, ದ್ವಾರಕೀಶ್ ಇತರರು ಆರೋಪಿಸಿ ವಿವರವಾದ ದೂರಿನ ಪಟ್ಟಿ ನೀಡಿದ್ದರು. ಅದರಂತೆ ತನಿಖೆಗೆ ಇಒ, ಗ್ರಾಪಂ ವ್ಯಾಪ್ತಿಯ ರಾಜೇಂದ್ರಪುರ ಗ್ರಾಮದಲ್ಲಿ ವಿವರಣೆ ಪಡೆಯುವಾಗ ಗ್ರಾಮಸ್ಥರು ಕಾಮಗಾರಿಯ ವಾಸ್ತವತೆ ಬಗ್ಗೆ ವ್ಯಾಪಕ ದೂರು ನೀಡುತ್ತಿದ್ದಾಗ ಸ್ಥಳದಲ್ಲಿದ್ದ ಪಿಡಿಒ ಮಧುಸೂಧನ್ ಎಂಬುವರು ಏರು ಧ್ವನಿಯಲ್ಲಿ ಗ್ರಾಮಸ್ಥರಿಗೆ ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಾಪಂ ಇಒ ಅವರ ಮುಂದೆಯೆ ಪಿಡಿಒ ಅವರ ಕಾರ್ಯ ವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಅಧಿಕಾರಿಯಾದರೇನು ಗ್ರಾಮಸ್ಥರಿಗೆ ಬೆದರಿಕೆ ಹಾಕಿದರೆ ನಡೆಯೋದಿಲ್ಲ, ಬೇಕಿದ್ದರೆ ಬನ್ನಿ ಕೈ ಕೈಮಿಲಾಯಿಸುವ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡರು.
ಈ ವೇಳೆ ತಾಪಂ ಇಒ ಜೋಸೆಫ್ ಗ್ರಾಮಸ್ಥರನ್ನು ಸಮಾಧಾನಗೊಳಿಸಿ ಬಂದಿರುವ ದೂರನ್ನು ಸಮಗ್ರವಾಗಿ ತನಿಖೆ ನಡೆಸಿ ಅಗತ್ಯ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ, ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ ಎಂದರು.
ಮಾದಗೋನಹಳ್ಳಿ ಗ್ರಾಮದಲ್ಲಿಯೂ ಕಾಮಗಾರಿ ಪರಿಶೀಲನೆ ವೇಳೆ ಜಟಾಪಟಿ ನಡೆಯಿತು. ಗ್ರಾಮದ ಮುಖಂಡರಾದ ಗಿರೀಶ್, ಮಂಜುನಾಥ ಇತರರು ಇದ್ದರು.
Comments are closed.