ಜನರು ಮಹನೀಯರ ಆದರ್ಶ ಪಾಲಿಸಲಿ: ಶಿವಪ್ಪ

161

Get real time updates directly on you device, subscribe now.


ತುಮಕೂರು: ಸರ್ಕಾರ ಸಮಾಜದ ಏಳಿಗೆಗೆ ಅವಿರತವಾಗಿ ದುಡಿದ ಮಹನೀಯರನ್ನು ಗುರುತಿಸಿ, ಅವರ ಹೆಸರಿನಡಿ ಜಯಂತ್ಯೋತ್ಸವ ಆಚರಿಸುತ್ತಾ ಬಂದಿದೆ. ಇದರಡಿ ಶುಕ್ರವಾರ ಕಾಯಕ ಶರಣರಾದ ಉರಿಲಿಂಗ ಪೆದ್ದಿ, ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮೊದಲಾದ ಶರಣರು ಸಮ ಸಮಾಜದ ನಿರ್ಮಾಣಕ್ಕೆ ನೀಡಿದ ಕೊಡುಗೆ ನೆನಪಿಸುವ ನಿಟ್ಟಿನಲ್ಲಿ ಕಾಯಕ ಶರಣರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ಶಿವಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು- ವತಿಯಿಂದ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರು 12ನೇ ಶತಮಾನದಲ್ಲಿ ನೀಡಿದ ಸಂದೇಶಗಳು ಈ ಭೂಮಿಯ ಮೇಲೆ ಮನುಷ್ಯರು ಇರುವವರೆಗೂ ಪ್ರಸ್ತುತವಾಗಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಶರಣರು ಸಾಮಾಜಿಕ ಸಮಾನತೆ, ಸಮಾಜದಲ್ಲಿನ ಅಜ್ಞಾನದ ನಿವಾರಣೆ, ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಅಪಾರವಾಗಿ ಶ್ರಮಿಸಿದ್ದರು. ಸರ್ಕಾರವು ಇಂತಹ ಮಹಾನ್ ಸಂತರನ್ನು ಗುರುತಿಸಿ ಅವರ ಹೆಸರಿನಡಿ ಜಯಂತ್ಯೋತ್ಸವ ಆಚರಿಸುತ್ತಾ ಬಂದಿರುವುದು ಹೆಚ್ಚು ಸಂತಸ ತಂದಿದೆ ಎಂದು ತಿಳಿಸಿದರು.

ಜಿಲ್ಲೆಯ ಹಿರಿಯ ಕಲಾವಿದರು ಹಾಗೂ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ ದಾಸ್ ಮಾತನಾಡಿ, 12ನೇ ಶತಮಾನವು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಕಾಲ. ಇಂತಹ ಸಂದರ್ಭದಲ್ಲಿ ಜೀವಿಸಿದ್ದ ಎಲ್ಲಾ ಶರಣರು ಸಾಮಾಜಿಕ ಏಳಿಗೆಗಾಗಿ ಅವಿರತವಾಗಿ ದುಡಿದವರು. ಸರ್ಕಾರವು ಇಂತಹ ಸಾಮಾಜಿಕ ಪರಿವರ್ತನೆಕಾರರನ್ನು ಗುರುತಿಸಿ ಅವರ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್ ಕುಮಾರ್, ಬಿ.ಆರ್.ರಾಜೇಗೌಡ, ಬಿ.ಕೆ.ರಾಜೇಶ್, ಮೇಘನಾ, ದರ್ಶನ್ ಹಾಗೂ ಸುವರ್ಣ ಕರ್ನಾಟಕ ಆದಿ ಜಾಂಬವ ಸಂಘದ ಪದಾಧಿಕಾರಿಗಳಾದ ಟಿ.ಎನ್.ನರಸಿಂಹರಾಜು, ನರಸಿಂಹಮೂರ್ತಿ, ಪತ್ರಕರ್ತ ಉಗಮ ಶ್ರೀನಿವಾಸ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!