ವಿಜ್ಞಾನ, ತಂತ್ರಜ್ಞಾನದಿಂದ ಕೃಷಿ ಕ್ಷೇತ್ರಕ್ಕೆ ವಿಪತ್ತು

264

Get real time updates directly on you device, subscribe now.


ತುಮಕೂರು: ಡಾ. ಸಿದ್ಧಗಂಗಯ್ಯ ಹೊಲತಾಳು ನಾಡು ಸುತ್ತಿ ಕೋಶ ರಚಿಸುತ್ತಾ ಸಾಹಿತ್ಯಲೋಕಕ್ಕೆ ತಮ್ಮ ಬದುಕು ಸಮರ್ಪಿಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿನ ವಿಶೇಷ ಆಸಕ್ತಿ ಹಾಗೂ ಕೃತಿ ರಚನೆಯಲ್ಲಿ ತೊಡಗಿರುವ ಅವರ ಹುರುಪು ಮತ್ತು ಉತ್ಸಾಹ ಪ್ರೇರಣಾಶೀಲವಾದದ್ದು ಎಂದು ಲೇಖಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಡಿವಿಜಿ ಅಧ್ಯಯನ ಕೇಂದ್ರವು ಆರೆಂಜ್ ಬುಕ್ಸ್ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಸಿದ್ಧಗಂಗಯ್ಯ ಹೊಲತಾಳು ಅವರ ಒಳನಾಡಿನ ಒಡನಾಟ ಕೃತಿ ಲೋಕಾರ್ಪಣೆ- ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ತಂದೊಡ್ಡಿರುವ ವಿಪತ್ತು ಕೇವಲ ಕನ್ನಡ ನೆಲದ ಒಳನಾಡಿಗಷ್ಟೇ ಅಲ್ಲದೆ ಇಡೀ ದೇಶವನ್ನೇ ವ್ಯಾಪಿಸಿದೆ. ಮುಂದಿನ ದಿನಗಳಲ್ಲಿ ಈ ಸ್ಥಿತ್ಯಂತರ ಯಾವ ಹಂತ ತಲುಪುವುದೋ ಎಂಬ ಆತಂಕವಿದೆ ಎಂದರು.

ಕೃತಿ ಲೋಕಾರ್ಪಣೆ ನೆರವೇರಿಸಿದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಮುಂದಿನ ದಿನಗಳಲ್ಲಿ ವಿವಿಯ ವಿದ್ಯಾರ್ಥಿಗಳೊಂದಿಗೆ ಸಿದ್ಧಗಂಗಯ್ಯ ಅವರ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡುವ ಚಿಂತನೆಯಿದೆ. ಅವರ ಒಳನಾಡಿನ ಒಡನಾಟ ಕೃತಿ ನಮ್ಮ ವಿವಿಯಲ್ಲಿ ಬಿಡುಗಡೆಯಾಗಿರುವುದು ಸಂತಸದ ವಿಚಾರ. ಕೃತಿಯು ಹೆಚ್ಚಿನ ಪ್ರಸರಣೆಯ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕೃತಿ ಕುರಿತು ಲೇಖಕ ಬಿ.ಎಸ್.ಜಯಪ್ರಕಾಶ ನಾರಾಯಣ ಮಾತನಾಡಿ, ಒಳನಾಡಿನ ಒಡನಾಟ ಕೃತಿ ಪ್ರವಾಸ ಕಥನ ಎನ್ನುವುದಕ್ಕಿಂತಲೂ ಮಿಗಿಲಾಗಿ ನಮ್ಮ ನೆಲದ ಕೃಷಿ ಸಂಸ್ಕೃತಿಯ ಒಂದು ದಾಖಲೀಕರಣವಾಗಿದೆ. ಸಾಹಿತ್ಯ ಪ್ರಕಾರದಲ್ಲಿ ಇದೊಂದು ವಿಶೇಷವಾದ ಕೃತಿ. ಇದರ ಪ್ರಾಮುಖ್ಯತೆ ಮತ್ತು ಮಹತ್ವ ಭವಿಷ್ಯದಲ್ಲಿ ಹೆಚ್ಚು ಪ್ರಚುರವಾಗುತ್ತದೆ ಎಂದು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಆವಿಷ್ಕಾರಗಳು ಹೆಚ್ಚುತ್ತಿರುವಂತೆ ಪರಿಸರ ಹಾನಿ ಮತ್ತು ಅಸಮತೋಲನವೂ ಹೆಚ್ಚಾಗುತ್ತಿದೆ. ನಮ್ಮ ಕಾಳಜಿಯಿಂದ ಅಸಮತೋಲನ ಸರಿಪಡಿಸಬೇಕು. ಒಳನಾಡಿನ ಒಡನಾಟ ಕೃತಿಯಲ್ಲಿನ ಲೇಖನಗಳು ಮತ್ತು ಸಂದರ್ಶನಗಳು ಅತ್ಯಂತ ರಮ್ಯವಾಗಿರುವ ಬರೆಹಗಳು ಎಂದು ತಿಳಿಸಿದರು.

ಕುವೆಂಪು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ಜಾನಪದ ತಜ್ಞ ಡಾ.ಬಸವರಾಜ ನೆಲ್ಲಿಸರ ಮಾತನಾಡಿ, ದೀಪ ತಾನು ಉರಿದು ಬೆಳಕು ನೀಡುವಂತೆ ಸದಾ ಕಲಿಯುತ್ತ, ಅಧ್ಯಯನ ನಡೆಸುತ್ತ ಕಲಿಸುವ ಅಧ್ಯಾಪಕರು ವಿದ್ವಾಂಸರು ಎನಿಸಿಕೊಳ್ಳುತ್ತಾರೆ. ಅಂಥವರ ಸಾಲಿಗೆ ಸೇರುವ ಸಿದ್ಧಗಂಗಯ್ಯ ಹೊಲತಾಳು ಅವರ ಒಳನಾಡಿನ ಒಡನಾಟವು ಹರಿಯುವ ನೀರಿನಂತೆ ಚಲನಶೀಲತೆಯಿಂದ ಸ್ವತಃ ಓದಿಸಿಕೊಳ್ಳುವ ಕೃತಿಯಾಗಿದೆ ಎಂದರು.

ಕೃತಿ ಕುರಿತು ವಿದ್ಯಾರ್ಥಿಗಳು ಮತ್ತು ನಾಗರಿಕರೊಂದಿಗೆ ಸಂವಾದ ನಡೆಯಿತು.
ಕಾರ್ಯಕ್ರಮದಲ್ಲಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ನಾಗಭೂಷಣ್, ಡಾ.ಪಿ.ಎಂ.ಗಂಗಾಧರಯ್ಯ, ಆರೆಂಜ್ ಬುಕ್ಸ್ ಸಂಸ್ಥೆಯ ಪ್ರಕಾಶಕ ಶಂಕರಾನಂದ.ಎಂ.ವಿ, ಸಮರ್ಥ್ ಫೌಂಡೇಷನ್ನ ರಾಣಿಚಂದ್ರಶೇಖರ್ ಹಾಗೂ ನಿಕಟ ಪೂರ್ವ ಸಿಂಡಿಕೇಟ್ ಸದಸ್ಯ ರಾಜು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!