ಗುಬ್ಬಿ: ನನ್ನ ಕಾರ್ಯಕರ್ತರ ಇಚ್ಛೆಯಂತೆ ನಾನು ನಡೆದುಕೊಳ್ಳುತ್ತೇನೆ ಹೊರತು ನನ್ನ ವೈಯಕ್ತಿಕ ನಿರ್ಧಾರ ಯಾವುದು ಇಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮದಲ್ಲಿ ಕೋಣನಕೆರೆ ಮಾರ್ಗವಾಗಿ ಕಡಬ ರಸ್ತೆ ಸಂಪರ್ಕಿಸುವ 4 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪ್ರತಿ ಚುನಾವಣೆಗೆ ಹೆಚ್ಚು ಹೆಚ್ಚು ಕಾರ್ಯಕರ್ತರು ನನ್ನ ಜೊತೆ ಬರುತ್ತಾರೆ. ಪ್ರತಿಯೊಬ್ಬರ ಮಾತು ನನಗೆ ಮುಖ್ಯ. ಮೊದಲಿಂದ ನನ್ನ ಜೊತೆ ಇರುವ ಮುಖಂಡರು, ಕಾರ್ಯಕರ್ತರು ಈಗಲೂ ಇದ್ದಾರೆ. ಕಾಂಗ್ರೆಸ್ ಸೇರಬೇಕು ಎಂಬ ಒಲವು ನಮ್ಮ ಕಾರ್ಯಕರ್ತರು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪಟ್ಟಿಯ ಬಗ್ಗೆ ನನಗೆ ಗೊತ್ತಿಲ್ಲಾ. ಅದು ಅವರ ಪಕ್ಷದ ವಿಚಾರ, ಮುಂದಿನ ವಾರ ನಡೆಯುವ ಬಜೆಟ್ ನಂತರ ನನ್ನ ಕಾರ್ಯಕರ್ತರ ಜೊತೆ ಸಭೆ ನಡೆಸಿಯೇ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಮುಖಂಡ ಕೊಪ್ಪ ವೆಂಕಟೇಶ ಮಾತನಾಡಿ, ಶ್ರೀನಿವಾಸ್ ಅವರಿಗೆ ಎಲ್ಲಾ ಸಮುದಾಯದವರು ಸಹ ಜೊತೆಗೆ ಇದ್ದಾರೆ. ಒಕ್ಕಲಿಗ ಸಮುದಾಯ ಕೇವಲ ಜೆಡಿಎಸ್ ಪಕ್ಷದ ಕಡೆ ಮಾತ್ರ ಹೋಗುತ್ತಾರೆ ಎನ್ನುವುದು ಸುಳ್ಳು. ಒಕ್ಕಲಿಗ ಸಮುದಾಯದ ನಾಯಕರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಹಾಗಾಗಿ ಗುಬ್ಬಿ ಕ್ಷೇತ್ರದಲ್ಲಿ ಜಾತಿಗಿಂತ ವ್ಯಕ್ತಿಗೆ ಹೆಚ್ವಿನ ಬೆಲೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ವೀರಶೈವ ಸಮುದಾಯದ ಹರ್ಷ ಮಾತನಾಡಿ ಈ ಬಾರಿ ವೀರಶೈವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀನಿವಾಸ್ ಪರವಿದ್ದು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತೆಗೆದುಕೊಂಡು ಈ ಬಾರಿ 5ನೇ ಬಾರಿ ಆಯ್ಕೆ ಯಾಗುತ್ತರೆ ಎಂದು ತಿಳಿಸಿದರು.
ಮುಖಂಡ ಕೊಪ್ಪ ದೇವರಾಜ್ ಮಾತನಾಡಿ, ಪ್ರತಿ ಸಮುದಾಯದ ಜೊತೆಗೆ ಶ್ರೀನಿವಾಸ್ ಅವರು ಇದ್ದಾರೆ. 20 ವರ್ಷದಲ್ಲಿ ಅವರ ಸೇವೆ ಅನನ್ಯ ವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮುಖಂಡರು ಶಾಸಕ ವಾಸಣ್ಣ ಅವರಿಗೆ ಬೃಹತ್ ಪುಷ್ಪಹಾರ ಹಾಕುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ರುದ್ರಮ್ಮ, ಮುಖಂಡರಾದ ಪಟೇಲ್ ದೇವರಾಜ್, ಸಿ.ಕೆ.ಗೌಡ, ಪಣಗಾರ್ ವೆಂಕಟೇಶ್, ಸಿದ್ದಲಿಂಗಪ್ಪ, ಕೆ.ಎಸ್.ಹರ್ಷ, ನರಸಿಂಹಮೂರ್ತಿ, ಕೆ.ಆರ್.ಶ್ರೀನಿವಾಸ್, ಕೋಣನಕೆರೆ ರಮೇಶ್, ಧರ್ಮೆಗೌಡ, ರಂಗೇಗೌಡ, ಸಿದ್ದರಾಜು, ವೆಂಕಟೇಶ್, ಗುತ್ತಿಗೆದಾರ ರಘು, ಪಂಚಾಯತ್ ರಾಜ್ ಇಲಾಖೆ ಎಇಇ ನಟರಾಜ್, ಎಇ ಲಿಂಗರಾಜ್ ಶೆಟ್ಟಿ, ಪಿಡಿಓ ಮಂಜುಳಾ ಪಾಟೀಲ್ ಇತರರು ಇದ್ದರು.
Comments are closed.