ವೈದ್ಯರು ಎಂದಿಗೂ ಜವಾಬ್ದಾರಿ ಮರೆಯದಿರಲಿ

ರೋಗಿಗಳ ಬಗ್ಗೆ ಎಂದು ಅಸಡ್ಡೆ ತೋರಬೇಡಿ: ಮಾಧುಸ್ವಾಮಿ ಸಲಹೆ

88

Get real time updates directly on you device, subscribe now.


ತುಮಕೂರು: ಸರಕಾರಿ ವೈದ್ಯರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗೆ ರೆಪರ್ ಮಾಡುವ ಪೋಸ್ಟ್ಮನ್ ಕೆಲಸದ ಬದಲು, ತಮ್ಮ ಶಕ್ತಿ ಅರಿತು ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾದರೆ ದೇವರ ಮಕ್ಕಳಾದ ಬಡವರ ಕಣ್ಣಿಗೆ ನೀವೇ ದೇವರಾಗುತ್ತೀರಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದ್ದಾರೆ.

ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಡಾ.ಹೆಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ 30ನೇ ರಾಜ್ಯ ಮಟ್ಟದ ಸಮ್ಮೇಳನ ಕಲ್ಪತರು ವೈದ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನೀವು ನಿಮ್ಮ ಕಲಿತ ವಿದ್ಯೆಯ ಸಂಪೂರ್ಣ ಬಳಕೆಗೆ ಮುಂದಾದರೆ ನಿಮ್ಮ ಪರವಾಗಿ ಕಾನೂನು ಮಂತ್ರಿಯಾಗಿ ನಾನು ನಿಲ್ಲಲ್ಲು ಸಿದ್ಧ ಎಂದ ಅಭಯ ನೀಡಿದರು.

ವೈದ್ಯರ ಕೆಲಸ ಅವಿರತ ಶ್ರಮವಿರುವ ಕೆಲಸ, ಕೋವಿಡ್ ಸಂದರ್ಭದಲ್ಲಿ ನಮ್ಮ ಸರಕಾರಿ ವೈದ್ಯರು ಹಾಗೂ ಅವರ ಸಿಬ್ಬಂದಿ ವರ್ಗ ತೆಗದುಕೊಂಡು ನಿರಂತರ ಪರಿಶ್ರಮದ ಫಲವಾಗಿ ಬಹುಬೇಗ ಸಾಂಕ್ರಾಮಿಕ ರೋಗ ಹತೋಟಿಗೆ ತರಲು ಸಾಧ್ಯವಾಯಿತು. ಇದಕ್ಕಾಗಿ ನಾನು ನಾಡಿನ ಎಲ್ಲಾ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರಕಾರಿ ಶಾಲೆಯ ಶಿಕ್ಷಕರು ಮತ್ತು ಸರಕಾರಿ ಆಸ್ಪತ್ರೆಯ ವೈದ್ಯರು ಪ್ರತಿಭಾವಂತರು. ಆದರೆ ತಮ್ಮ ಪ್ರತಿಭೆ ಓರೆಗೆ ಹಚ್ಚಲು ಹಿಂದೇಟು ಹಾಕುವ ಪರಿಣಾಮ ಈ ವಲಯದಲ್ಲಿ ಖಾಸಗಿ ಶಾಲೆಗಳು, ಆಸ್ಪತ್ರೆಗಳು ವಿಜೃಂಭಿಸುತ್ತಿವೆ. ನಿಮ್ಮ ಬಳಿ ಬರುವ ದೇವರ ಮಕ್ಕಳಿಗೆ ಒಳ್ಳೆಯ ಸೇವೆ ನಿಮ್ಮಿಂದ ದೊರೆತರೆ ಅದು ಭಗವಂತನಿಗೆ ಪ್ರೀತಿಯಾಗುತ್ತದೆ. ಜನರ ಹೃದಯದಲ್ಲಿ ಸ್ಥಾನ ಗಳಿಸುತ್ತೀರಿ. ರೋಗಿಗಳ ಬಗ್ಗೆ ಅಸಡ್ಡೆ ತೋರದೆ, ಆತನನ್ನು ಪರೀಕ್ಷಿಸಿದ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳುವುದರಿಂದ ನೀವು ನೀಡುವ ಚಿಕಿತ್ಸೆ ದೇಹಕ್ಕಿಂತ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಜೆ.ಸಿ.ಮಾಧುಸ್ವಾಮಿ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ.ಎಂ.ಇಂದುಮತಿ, ಡಾ.ಪ್ರಮಿಳಾ ಮರೂರ್ ಮಾತನಾಡಿದರು. ವೀಕ್ಷಕರಾದ ಡಾ.ರವಿ, ಮಾಜಿ ಅಧ್ಯಕ್ಷ ಡಾ.ರಂಗನಾಥ್, ಡಾ.ಸೈಯದ್ ಮದಿನಿ, ಡಾ.ಮೇಟಿ, ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಚೇತನ್, ಡಾ.ಡಿ.ಎಂ.ಗೌಡ, ಡಾ.ಚಂದನ್, ಡಿಹೆಚ್ಓ ಡಾ.ಮಂಜುನಾಥ್, ಡಿಎಸ್ ಡಾ.ವೀಣಾ, ಡಾ.ರಜಿನಿ, ಡಾ.ದಿನೇಶ್, ಡಾ.ಸನತ್, ಡಾ.ಚಂದ್ರಶೇಖರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!