ನಂಜುಂಡ ಸ್ವಾಮಿ ರೈತಪರ ನಾಯಕ: ಸೋಮಶೇಖರ್

147

Get real time updates directly on you device, subscribe now.


ತುಮಕೂರು: ವ್ಯವಸ್ಥೆಯ ವಿರುದ್ಧ ಮುಖ್ಯವಾಗಿ ಭ್ರಷ್ಟರ ವಿರುದ್ಧ ಕಾನೂನು ಪಂಡಿತರಾಗಿ, ರೈತ ಚಳವಳಿಗಳ ನಾಯಕನಾಗಿ, ದೇಶದ ಅಭಿವೃದ್ಧಿಯಲ್ಲಿ ರೈತನ ಪಾತ್ರದ ಅರಿವನ್ನು ಮೂಡಿಸುವಲ್ಲಿ ಉದಯೋನ್ಮೂಖವಾಗಿ ಕಾರ್ಯ ನಿರ್ವಹಿಸಿದ ನಂಜುಂಡಸ್ವಾಮಿ ಅವರು ಮಣ್ಣಿನ ಮಗನಾದರು ಎಂದು ಮೈಸೂರು ವಿಶ್ವವಿದ್ಯಾನಿಲಯ ಡಾ. ಬಿ. ಆರ್.ಅಂಬೇಡ್ಕರ್ ಸಂಶೋಧನಾ ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಪ್ರೊ.ಜೆ. ಸೋಮಶೇಖರ್ ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸೋಮವಾರ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ನಾಯಕತ್ವ ರೈತ ಚಳವಳಿಯ ಆಶಯ ಮತ್ತು ಇಂದಿನ ರೈತ ಚಳವಳಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉನ್ನತ ಶಿಕ್ಷಣವನ್ನು ಕೆನಡಾದಲ್ಲಿ ಮುಗಿಸಿ, ಅಲ್ಲಿ ಕೆಲಸಕ್ಕೆ ಹೋಗಲು ಮನಸೊಪ್ಪದೆ ಮತ್ತೇ ರೈತ ಕುಟುಂಬಕ್ಕೆ ಹಿಂತಿರುಗಿದರು. ರೈತನ ಹಾಗೂ ಸಮಾಜದ ಏಳಿಗೆಗಾಗಿ ಸಣ್ಣ ಇಡುವರಿದಾರರ ಸಂಘಟನೆ ಜಾರಿಗೆ ತಂದರು. ರೈತರಿಗೆ ಸ್ವಾಭಿಮಾನದ ಅನ್ನ, ಬದುಕು ಕೊಡುವುದೇ ನಂಜುಂಡ ಸ್ವಾಮಿಯವರ ಹೋರಾಟವಾಗಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳಾದ ನೀವೂ ಅನಾವಶ್ಯಕ ವಿಚಾರಗಳಿಗೆ ಹೋರಾಟ ಮಾಡುವ ಬದಲು ರೈತರ ಪರವಾಗಿ, ಉತ್ತಮ ಸಮಾಜಕ್ಕಾಗಿ ಹೋರಾಟ ಮಾಡಬೇಕು. ದೇಶ ಕಾಯುವ ಯೋಧ ತಂದೆಯಾದರೆ, ಅನ್ನ ನೀಡುವ ರೈತ ನಮ್ಮೆಲ್ಲರಿಗೂ ತಾಯಿ, ಇಬ್ಬರೂ ಸಮಾಜದ ಆಧಾರ ಸ್ತಂಭಗಳು ಎಂದು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ಜಮ್ ಮಾತನಾಡಿ, ರೈತರಿಗೆ ಕರುಣೆ ತೋರಿಸುವ ಬದಲು ನಾವು ಅವರಿಗೆ ಸಹಾಯ ಮಾಡಬೇಕು. ಅವರು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಕಲ್ಪಿಸುವುದರ ಮೂಲಕ ನ್ಯಾಯ ಒದಗಿಸಿ ಪ್ರೋತ್ಸಾಹಿಸಬೇಕು ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ. ಮಾತನಾಡಿ, ಎಚ್.ಎಸ್.ರುದ್ರಪ್ಪ, ಸುಂದರೇಶ್ ಮತ್ತು ಎಂ.ಡಿ. ನಂಜುಂಡಸ್ವಾಮಿ ರೈತ ಹೋರಾಟದ ತ್ರಿಮೂರ್ತಿಗಳು, ರೈತ ನಾಯಕರ ಹೋರಾಟದ ಇತಿಹಾಸವನ್ನು ನಾವು ಅರಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಪ್ರೊ.ನಂಜುಂಡ ಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ.ಮುನಿರಾಜು.ಎಂ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ವಿಲಾಸ್ ಎಂ.ಕಾದ್ರೋಳಕರ, ಪ್ರೊ.ರವೀಂದ್ರಕುಮಾರ್.ಬಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!