ಮತಗಟ್ಟೆಗಳಲ್ಲಿ ತುರ್ತಾಗಿ ಮೂಲ ಸೌಕರ್ಯ ಕಲ್ಪಿಸಿ

ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

77

Get real time updates directly on you device, subscribe now.


ತುಮಕೂರು: ವಿಧಾನಸಭಾ ಕ್ಷೇತ್ರ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಪೀಠೋಪಕರಣ, ವಿದ್ಯುತ್ ಸರಬರಾಜು, ರ್ಯಾಂಪ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯವನ್ನು ತುರ್ತಾಗಿ ಕಲ್ಪಿಸಬೇಕೆಂದು ಎಲ್ಲಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿ, ಮತದಾರರು ಮತದಾನ ಮಾಡಲು ಅನುವಾಗುವಂತೆ ಮತಗಟ್ಟೆಗಳಲ್ಲಿ ಮೂಲ ಸೌಲಭ್ಯ ಇಲ್ಲದಿದ್ದಲ್ಲಿ ಕೂಡಲೇ ಒದಗಿಸಲು ಕಾರ್ಯ ಪ್ರವೃತ್ತರಾಗಬೇಕು. ಈ ಬಗ್ಗೆ ಒಂದು ವಾರದೊಳಗೆ ನಿಖರ ಮಾಹಿತಿ ನೀಡಬೇಕು ಎಂದರಲ್ಲದೆ ಮುಂದಿನ 10 ದಿನಗಳೊಳಗೆ ಮತಗಟ್ಟೆಗಳಿಗೆ ಮೂಲ ಸೌಲಭ್ಯ ಒದಗಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದೆಂದು ತಿಳಿಸಿದರು.

ಮತಗಟ್ಟೆಗಳು ಶಾಲೆಗಳಲ್ಲಿ ಸ್ಥಾಪನೆಯಾಗಿದ್ದರೆ ತಹಶೀಲ್ದಾರರು ಸೂಚಿಸುವ ಕೋಣೆಯನ್ನು ಮತದಾನಕ್ಕೆ ಬಿಟ್ಟುಕೊಡುವ ಬಗ್ಗೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಬೇಕೆಂದು ತುಮಕೂರು ಹಾಗೂ ಮಧುಗಿರಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದು ಹಾಕುವ ಬಗ್ಗೆ ಸ್ವೀಕೃತ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯ ಜಮೀನುಗಳನ್ನು ಶಾಲೆಯ ಹೆಸರಿಗೆ ನೋಂದಣಿ, ಇ-ಸ್ವತ್ತು ಮಾಡಿಕೊಂಡು ತಹಶೀಲ್ದಾರ್ ಹಂತದಲ್ಲಿ 296 ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳ ಹಂತದಲ್ಲಿ 264 ಸೇರಿದಂತೆ 560 ಪ್ರಕರಣಗಳು ಬಾಕಿ ಇದ್ದು, ಕೂಡಲೇ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕೆಂದು ನಿರ್ದೇಶನ ನೀಡಿದರು.

ಸ್ಮಶಾನ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಆಯಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಭೌತಿಕವಾಗಿ ಪಂಚಾಯತಿ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಎಲ್ಲಾ ಸರ್ಕಾರಿ ಅಧಿಕಾರಿಗಳೂ ತಮ್ಮ ಕಚೇರಿ ಆವರಣದಲ್ಲಿ ಪ್ರತಿ ಮಾಹೆಯ ಮೊದಲನೆ ಶನಿವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ನೈರ್ಮಲ್ಯತೆ ಕಾಪಾಡುವಲ್ಲಿ ಇತರರಿಗೆ ಮಾದರಿಯಾಗಬೇಕು. ಕಾಲಕಾಲಕ್ಕೆ ಪಹಣಿಗಳನ್ನು ಅಪ್ ಡೇಟ್ ಮಾಡಬೇಕು ಹಾಗೂ ಎಲ್ಲಾ ತಾಲ್ಲೂಕುಗಳಿಗೂ 1000 ಆಧಾರ್ ಕಾರ್ಡ್ ವಿತರಣೆ ಮಾಡಲು ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಕಳೆದ ವಾರ ಫೆಬ್ರವರಿ 6 ರಂದು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಮುಖ ಕಾರಣವಾದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ನಿರೀಕ್ಷೆಗಿಂತ ಕಾರ್ಯಕ್ರಮ ಯಶಸ್ವಿಯಾಗಿದ್ದಕ್ಕೆ ಮುಖ್ಯಮಂತ್ರಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೂ ಜಿಲ್ಲಾಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಉಳಿದಂತೆ ಸಭೆಯಲ್ಲಿ ತಸ್ತಿಕ್ ಅನುದಾನ ಹಾಗೂ ಎಸ್ಸಿಪಿ, ಟಿಎಸ್ಪಿ ವಿಶೇಷ ಅನುದಾನ ಖರ್ಚು ಮಾಡುವ, ಸಾಮಾಜಿಕ ಭದ್ರತಾ ಪಿಂಚಣಿ, ಭೂಮಿ ಪೆಂಡೆನ್ಸಿ, ಆರ್ಟಿಸಿ ಇಂದೀಕರಣ, ಆರ್ಆರ್ಟಿ ತಿದ್ದುಪಡಿ, ನಾಡಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೊಬೈಲ್ ಆ್ಯಪ್ ಮೂಲಕ ಖಾಸಗಿ ಪ್ರತಿನಿಧಿಗಳು ಕೈಗೊಂಡಿದ್ದ ಬೆಳೆ ಸಮೀಕ್ಷೆಯಲ್ಲಿ ಬಹು ವಾರ್ಷಿಕ ಬೆಳೆ ವಿವರವನ್ನು ದಾಖಲಿಸುವಲ್ಲಿ ಹಲವು ಲೋಪ ಕಂಡು ಬಂದಿರುವುದರಿಂದ ಸದರಿ ಲೋಪ ಸರಿಪಡಿಸಲು ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ಹಿಂದಿನ ಮೂರು ವರ್ಷಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಎಲ್ಲಾ ಬಹು ವಾರ್ಷಿಕ ಬೆಳೆಗಳ ತಾಕುಗಳನ್ನು ಪರಿಶೀಲಿಸಿ ದೃಢೀಕರಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಕಳೆದ 2018, 2019ರ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕಡಿಮೆ ಮತದಾನಕ್ಕೆ ಕಾರಣವೇನೆಂದು ಅಧ್ಯಯನ ಮಾಡಬೇಕು. ಈವರೆಗೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸದಿರುವ ಮತದಾರರು, ಯುವ ಮತದಾರರ ಮಾಹಿತಿ ಪಡೆದು ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಅರಿವು ಮೂಡಿಸಬೇಕು. ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕೆಂದರಲ್ಲದೆ, ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅರ್ಹ ಮತದಾರರ ವಾಟ್ಸಪ್ ಗ್ರೂಪ್ ರಚಿಸಿ ಚುನಾವಣೆ ಸಂಬಂಧಿತ ಮಾಹಿತಿ ಹಂಚಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.

ಅಂಕಿ- ಅಂಶದ ಆಧಾರದನ್ವಯ ಜಿಲ್ಲೆಯಲ್ಲಿ ಸುಮಾರು 43000 ಯುವ ಮತದಾರರಿದ್ದು, ಈವರೆಗೂ 36000 ಯುವ ಮತದಾರರು ಮಾತ್ರ ಮತದಾರರ ಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ. ಉಳಿದ ಯುವ ಮತದಾರರನ್ನು ನೋಂದಾಯಿಸಲು ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರು ನೋಂದಣಿಯಾಗುವಂತೆ ಕ್ರಮವಹಿಸಬೇಕೆಂದು ತಿಳಿಸಿದರು.

ಸಭೆಯ ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಆರ್.ಲೋಕೇಶ್ ಮಾತನಾಡಿ, ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಘೋಷವಾಕ್ಯದಂತೆ ಉನ್ನತ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುವಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯವು ಮುಂಚೂಣಿಯಲ್ಲಿದೆ. ನೌಕರಿಯಲ್ಲಿರುವವರು ಸಹ ಪದೋನ್ನತಿ, ಜ್ಞಾನಾರ್ಜನೆಗಾಗಿ ದೂರ ಶಿಕ್ಷಣದ ಮೂಲಕ ಪದವಿ ಹೊಂದಬಹುದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದವರು ತಮ್ಮ ಅಧೀನ ಸಿಬ್ಬಂದಿಗೆ ದೂರ ಶಿಕ್ಷಣದ ಮೂಲಕ ವಿವಿಧ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಶಿವಪ್ಪ, ತಹಶೀಲ್ದಾರ್ ಸಿದ್ದೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ, ಡಾ.ಮೋಹನ್ ದಾಸ್, ಡಾ.ಸನತ್ ಕುಮಾರ್, ಕಚೇರಿ ಸಹಾಯಕ ಮೋಹನ್ ಕುಮಾರ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಅತಿಕ್ ಪಾಷ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!