ಕುಣಿಗಲ್: ಹುಟ್ಟುಹಬ್ಬದ ದಿನದಂದೆ ಕೊಲೆಯಾಗಿದ್ದ ಯುವಕನ ಕೊಲೆ ಪ್ರಕರಣವನ್ನು ಕುಣಿಗಲ್ ಪೊಲೀಸರು ಪತ್ತೆ ಹಚ್ಚಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ನೀಡಿರುವ ಘಟನೆ ಬಯಲಿಗೆಳೆದಿದ್ದಾರೆ.
ಫೆ.3ರಂದು ತಾಲೂಕಿನ ಹುತ್ರಿದುರ್ಗ ಹೋಬಳಿಯ ಮಂಜುನಾಥ (26) ಪಟ್ಟಣದಲ್ಲಿ ಸ್ನೇಹತರೊಡಗೂಡಿ ಜನ್ಮ ದಿನಾಚರಣೆ ಆಚರಿಸಿಕೊಂಡು ತಡರಾತ್ರಿ ಮನೆಗೆ ತೆರಳಿದ್ದ, ಆದರೆ ಮರುದಿನ ಆತನ ಮೃತದೇಹ ಹಾಗೂ ಬೈಕ್ ಕಿತ್ತನಾಗಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪತ್ನಿ ಹರ್ಷಿತಾ ಪೊಲೀಸರಿಗೆ ದೂರು ನೀಡಿದ್ದಳು. ದೂರು ದಾಖಲಿಸಿದ ಕುಣಿಗಲ್ ಪೊಲೀಸರು ಪ್ರಕರಣದ ತನಿಖೆಗೆ ಇಳಿದಾಗ ಮೊದ ಮೊದಲಿಗೆ ಯಾವುದೇ ಸಮರ್ಪಕ ಸುಳಿವು ಸಿಕ್ಕಿರಲಿಲ್ಲ.
ನಂತರ ಪತ್ನಿಯ ಮೊಬೈಲ್ ಕರೆ ಸೇರಿದಂತೆ ಚಾಟ್ಗಳ ಬಗ್ಗೆ ಪರಿಶೀಲಿಸಿದಾಗ ಇಡೀ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಮಂಜುನಾಥನ ಪತ್ನಿ ಹರ್ಷಿತಾ ಕಳೆದ ಹನ್ನೊಂದು ತಿಂಗಳ ಹಿಂದೆ ಮಂಜುನಾಥನೊಂದಿಗೆ ವಿವಾಹವಾಗಿದ್ದಳು.
ಮದುವೆಯಾದಾಗಿನಿಂದಲೂ ಮಂಜುನಾಥನೊಂದಿಗೆ ಅಷ್ಟೇನು ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಮಂಜುನಾಥ ಬೆಂಗಳೂರಿನಲ್ಲಿ ಅಡುಗೆ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು ಬಾಡಿಗೆ ಮನೆಯಲ್ಲಿ ಬಾಡಿಗೆಗೆ ಇದ್ದ, ಈ ಮನೆಯ ಪಕ್ಕದಲ್ಲೆ ಹರ್ಷಿತಾಳ ಸಂಬಂಧಿ ವರಸೆಯಲ್ಲಿ ದೊಡ್ಡಮ್ಮನ ಮಗನಾದ ರಘು ಸಹ ಇದ್ದು, ಇಬ್ಬರ ನಡುವೆ ಸಲುಗೆ ಇದ್ದು, ಕ್ರಮೇಣ ಸಂಬಂಭಕ್ಕೆ ಬದಲಾಗಿತ್ತು. ಈ ಬಗ್ಗೆ ಅನುಮಾನಗೊಂಡ ಮಂಜುನಾಥ ಪತ್ನಿಯನ್ನು ಸೀನಪ್ಪನಹಳ್ಳಿಯ ಗ್ರಾಮದ ಮನೆಗೆ ಕರೆತಂದು ಇಟ್ಟಿದ್ದ. ಆದರೂ ಆಗಾಗ್ಗೆ ರಘು ಬಂದು ಹೋಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಫೆ.3 ರಂದು ಮಂಜುನಾಥ ಹುಟ್ಟು ಹಬ್ಬಾಚರಣೆಗೆ ಕುಣಿಗಲ್ ಪಟ್ಟಣಕ್ಕೆ ಆಗಮಿಸಿ ಸ್ನೇಹಿತರೊಂದಿಗೆ ಜನ್ಮಾ ದಿನಾಚರಣೆ ಆಚರಿಸಿಕೊಂಡು ಗ್ರಾಮಕ್ಕೆ ತೆರಳಿದ್ದ, ಇದೆ ವೇಳೆ ರಘುವಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದ ಪತ್ನಿ, ಮೊದಲೆ ಯೋಜಿಸಿದಂತೆ ರಘು ಇತರೆ ಆರು ಮಂದಿ ಸ್ನೇಹಿತರೊಂದಿಗೆ ಆಗಮಿಸಿ ಮಂಜುನಾಥ ಮಲಗಿದ್ದ ಸಮಯದಲ್ಲಿ ಆತನ ಕೊಲೆ ಮಾಡಿ ನಂತರ ಆತ ಹಾಗೂ ಆತನ ಬೈಕನ್ನು ಸಮೀಪದ ಕಿತ್ತನಾಗಮಂಗಲ ಕೆರೆಯಲ್ಲಿ ಎಸೆದು ಹೋಗಿದ್ದರು, ಅನುಮಾನ ಬಾರದ ಹಾಗೆ ಮಂಜುನಾಥ ಜೇಬಿನಲ್ಲಿ ಗಾಂಜ ಇಟ್ಟು ಗಾಂಜ ಸೇವಿಸಿ ಕೆರೆಗೆ ಬಿದಿದ್ದಾನೆಂದು ಸೃಷ್ಟಿಸುವ ಯತ್ನ ಸಹ ಮಾಡಿದ್ದರು.
ಪ್ರಕರಣದ ತನಿಖೆಯಲ್ಲಿ ಪತ್ನಿ ಹರ್ಷಿತಾ ತನ್ನ ಸಂಬಂಧಿ ರಘುವಿನ ಸ್ನೇಹದ ಸಂಕೇತವಾಗಿ ಹೆಚ್ಆರ್ ಸಂಕೇತ ಬಳಸಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಕೆಲ ಚಾಟ್ಗಳನ್ನು ನಡೆಸಿದ್ದು, ಕೊಲೆಗೆ ಮುನ್ನ ಪತಿಯಿಂದಲೆ ಲಕ್ಷಾಂತರ ರೂ. ಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದು, ಇದೇ ಹಣ ಕೃತ್ಯಕ್ಕೆ ಬಳಸಿರುವ ಬಗ್ಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೃತ್ಯಕ್ಕೆ ಸಹಕರಿಸಿದ ರಘುವಿನ ಸೋದರ ರವಿಕಿರಣ, ಕಾಡು ಮತ್ತೀಕೆರೆ ಗ್ರಾಮದ ಅರುಣ, ಕೇಶವ, ನಟರಾಜ, ಶ್ರೀಧರ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ
Comments are closed.