ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಮಿಶ್ರಣ

ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

126

Get real time updates directly on you device, subscribe now.


ಕುಣಿಗಲ್: ಪಡಿತರ ವಿತರಣೆ ಮೂಲಕ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗಿರುವ ಅಕ್ಕಿಯಲ್ಲಿ ರಸಗೊಬ್ಬರ ಮಿಶ್ರಣವಾಗಿರುವುದನ್ನು ಪತ್ತೆಹಚ್ಚಿದ ಗ್ರಾಮಸ್ಥರು ಆಹಾರ ಇಲಾಖಾಧಿಕಾರಿಗಳನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ದೋಷಪೂರಿತ ಅಕ್ಕಿ ಹಿಂಪಡೆದು ಬೇರೆ ಅಕ್ಕಿ ಪೂರೈಕೆ ಮಾಡಿದ ಘಟನೆ ನಡೆದಿದೆ.

ತಾಲೂಕಿನ ಅಮೃತೂರು ಗ್ರಾಮದ ಹೋಬಳಿ ಕೇಂದ್ರದಲ್ಲಿ ನಾಲ್ಕು ಪಡಿತರ ಧಾನ್ಯ ವಿತರಣೆಗೆ ನ್ಯಾಯಬೆಲೆ ಅಂಗಡಿಗಳಿದ್ದು ಈ ಪೈಕಿ ರೇಣುಕಮ್ಮ ಎಂಬುವರ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ಪೂರೈಕೆ ಮಾಡಲಾಗಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸೋಮವಾರ ರಾತ್ರಿ ವಿತರಣೆ ಮಾಡಲು ಮುಂದಾದಾಗ ಅಕ್ಕಿಯ ಜೊತೆ ಬಿಳಿ ಹರಳುಗಳು ಪತ್ತೆಯಾಗಿದ್ದು ಪಡಿತರ ಕಾರ್ಡ್ ದಾರರು ಹಾಗೂ ಗ್ರಾಮಸ್ಥರು ಪತ್ತೆ ಹಚ್ಚಿ, ನ್ಯಾಯಬೆಲೆ ಅಂಗಡಿ ಮಾಲೀಕರ ಗಮನಕ್ಕೆ ತಂದರು. ಆದರೆ ಬೇರೆ ನ್ಯಾಯಬೆಲೆ ಅಂಗಡಿಯಲ್ಲಿ ಯಾವುದೇ ಮಿಶ್ರಣ ಇಲ್ಲದ ಶುದ್ಧ ಅಕ್ಕಿ ವಿತರಣೆಯಾಗಿತ್ತು. ನಂತರ ಗ್ರಾಮಸ್ಥರು ಬಿಳಿ ಹರಳುಗಳನ್ನು ಪರಿಶೀಲಿಸಿದಾಗ ಅವು ಯೂರಿಯಾ ಹಾಗೂ ಇತರೆ ಕಾಂಪೋಸ್ಟ್ ಗೊಬ್ಬರದ ಹರಳಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಗಿರುವ ಅವ್ಯವಸ್ಥೆ ಬಗ್ಗೆ ದೂರು ನೀಡಿದರಲ್ಲದೆ ರಸಗೊಬ್ಬರ ಮಿಶ್ರಿತ ಅಕ್ಕಿ ತಿಂದು ಜನರು ಏನಾಗಬೇಕು ಎಂದು ಪ್ರಶ್ನಿಸಿ ರಾತ್ರಿಯೆ ಸ್ಥಳಕ್ಕಾಗಮಿಸುವಂತೆ ಆಗ್ರಹಿಸಿದರು. ನಂತರ ಅಧಿಕಾರಿಗಳ ಸೂಚನೆ ಮೇರೆಗ ವಿತರಣೆ ಕಾರ್ಯ ಸ್ಥಗಿತಗೊಳಿಸಿ ಮಂಗಳವಾರ ಬೆಳ್ಳಂ ಬೆಳಗ್ಗೆ ತಹಶೀಲ್ದಾರ್ ಮಹಾಬಲೇಶ್ವರ್, ಆಹಾರ ನಿರೀಕ್ಷಕ ಸಚ್ಚಿನ್ ಪ್ರಸಾದ್ ಸ್ಥಳಕ್ಕೆ ತೆರಳಿ ರಸಗೊಬ್ಬರ ಮಿಶ್ರಿತ ಸುಮಾರು ಆರು ಕ್ವಿಂಟಾಲ್ ಅಕ್ಕಿಯನ್ನು ಹಿಂಪಡೆದು ಸ್ವಚ್ಛ ಅಕ್ಕಿ ಪೂರೈಕೆ ಮಾಡಿ ಪಡಿತರ ಕಾರ್ಡ್ದಾರರಿಗೆ ವಿತರಣೆಗೆ ಕ್ರಮ ಕೈಗೊಂಡರು.

ಈ ಬಗ್ಗೆ ಮಾತನಾಡಿದ ಅಧಿಕಾರಿಗಳು ಸಗಟು ಪೂರೈಕೆಯಲ್ಲೆ ವ್ಯತ್ಯಯವಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!