ರೈತರಿಗೆ ಅಗತ್ಯ ಸೌಲಭ್ಯ ನೀಡಲಿ: ರಂಗನಾಥ್

ಸರ್ಕಾರ, ಜನಪ್ರತಿನಿಧಿಗಳು ಪೊಳ್ಳು ಭರವಸೆ ನೀಡುವುದು ನಿಲ್ಲಿಸಲಿ

195

Get real time updates directly on you device, subscribe now.


ಕುಣಿಗಲ್: ರೈತರ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರಗಳು, ಜನಪ್ರತಿನಿಧಿಗಳು ಬರಿ ಪೊಳ್ಳು ಮಾತಿನ ಭರವಸೆ ನೀಡದೆ ರೈತರಿಗೆ ಕಾಲ ಕಾಲಕ್ಕೆ ತಕ್ಕಂತೆ ಬೇಕಾದ ಅಗತ್ಯ ಸೌಲಭ್ಯ ನೀಡಬೇಕಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.

ಪಟ್ಟಣದ ಆರ್ಎಂಎಸ್ ಯಾರ್ಡ್ನಲ್ಲಿ ತಾಲೂಕು ಕೃಷಿಕ ಸಮಾಜದ ವತಿಯಿಂದ ಕೃಷಿಭವನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ರೈತರು ಬದಲಾದ ಕಾಲ ಘಟಕ್ಕೆ ತಕ್ಕಂತೆ ಕೃಷಿ ಪದ್ಧತಿಯಲ್ಲಿ ಮಾರ್ಪಾಡು ಮಾಡಿ ಕೊಳ್ಳುತ್ತಿಲ್ಲ. ಇದಕ್ಕೆ ಪೂರಕವಾಗಿ ಸರ್ಕಾರಗಳು, ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿಲ್ಲ. ಬರಿ ಬಾಯಿ ಮಾತಿನಲ್ಲಿ ಅದು ಇದು ಯೋಜನೆ ಎಂದು ಹೇಳುತ್ತಾ ರೈತರ ಮೂಗಿಗೆ ತುಪ್ಪ ಸವರುವ ಕೆಲಸವಾಗುತ್ತಿದೆ. ಅತ್ಯಲ್ಪ ಕಡಿಮೆ ನೈಸರ್ಗಿಕ ಸಂಪನ್ಮೂಲ ಬಳಸಿ ಮರು ಭೂಮಿಯಲ್ಲಿರುವ ಇಸ್ರೇಲ್ ದೇಶ ಮಾಡಿರುವ ಸಾಧನೆ ನಮ್ಮ ಮುಂದಿದ್ದರೂ ನಮ್ಮ ರೈತರನ್ನು ಆ ನಿಟ್ಟಿನಲ್ಲಿ ಕೊಂಡೊಯ್ಯಲು ಯಾವುದೇ ಸರ್ಕಾರಗಳು ಮನಸು ಮಾಡುತ್ತಿಲ್ಲ.

ಉದ್ದಿಮೆದಾರರ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರಗಳು ಕಷ್ಟದಲ್ಲಿ ರುವ ರೈತನಿಗೆ ತುರ್ತಾಗಿ ಬೇಕಾಗಿರುವ ಕೃಷಿ ಮೂಲಭೂತ ಸೌಕರ್ಯಗಳಾದ ಕಿರುಸಾಲ, ನೀರಾವರಿ ಯೋಜನೆ ಹಾಗೂ ಬೆಳೆದ ಬೆಳೆಗೆ ನ್ಯಾಯಯುತ ದರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ರೈತರ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದರು.

ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣ ಗೌಡ ಮಾತನಾಡಿ, ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯೋಚಿತ ಬೆಲೆಗಳು ಸಿಗುತ್ತಿಲ್ಲ ಎಂಬುದು ಕೇವಲ ನಮ್ಮ ದೇಶದಲ್ಲೆ ಅಲ್ಲ ಮುಂದುವರಿದ ರಾಷ್ಟ್ರಗಳಲ್ಲೂ ಇದೆ. ಇದಕ್ಕೆ ಕೃಷಿ ಕೈಗೊಳ್ಳುವಾಗ ಬರುವ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧಿತವಾಗಿ ತಯಾರಿಸುವ ವಿಭಿನ್ನ ರೀತಿಯ ಉದ್ಯೋಗಗಳು ಸೃಷ್ಟಿಯಾದಾಗ ರೈತರಿಗೆ ಕೃಷಿ ಉತ್ಪನ್ನಗಳಿಂದ ನಿಶ್ಚಿತ ಆದಾಯ ದೊರೆತು ಆರ್ಥಿಕವಾಗಿ ಅನುಕೂಲವಾಗುತ್ತದೆ.

ತೆಂಗು ಬೆಳೆ ಕೈಗೊಂಡಾಗ ಅದರ ಮಧ್ಯದಲ್ಲಿ ಅರಿಷಿಣ ಸೇರಿದಂತೆ ಇತರೆ ಬೆಳೆಗಳನ್ನು ಪರಿಣಾಮಕಾರಿಯಾಗಿ ವೈಜ್ಞಾನಿಕವಾಗಿ ತಜ್ಞರ ಮಾರ್ಗದರ್ಶದನದಲ್ಲಿ ಅಳವಡಿಸಿಕೊಂಡಾಗ ತೆಂಗಿನ ಜೊತೆಯಲ್ಲಿ ಉಪ ಬೆಳೆಗಳಿಂದಲೂ ಉತ್ತಮ ಆದಾಯ ವೃದ್ಧಿಸಿಕೊಳ್ಳಬಹುದಾಗಿದೆ. ಈ ದಿಸೆಯಲ್ಲಿ ರೈತರು ಚಿಂತನೆ ನಡೆಸಬೇಕು ಹಾಗೂ ಈ ನಿಟ್ಟಿನಲ್ಲಿ ಬೇಕಾದ ಅಗತ್ಯ ಮಾರ್ಗದರ್ಶನ ಸಲಹೆ ಸೂಚನೆಗಳಿಗೆ ಕೃಷಿ ಇಲಾಖೆ, ಕೃಷಿಕ ಸಮಾಜ, ಕೃಷಿ ವಿವಿಯ ಸಂಶೋಧನ ಕೇಂದ್ರಗಳಿಗೆ ಭೇಟಿ ನುರಿತ ವಿಷಯ ತಜ್ಞರ ನೆರವು ಪಡೆದು ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬೇಕು ಎಂದರು.

ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಅನಸೂಯಮ್ಮ ಕಳಸೆಗೌಡ ಸಮಾಜದ ಕಾರ್ಯ ವೈಖರಿ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ತಹಶೀಲ್ದಾರ್ ಮಹಾಬಲೇಶ್ವರ್, ಸಹಾಯಕ ಕೃಷಿ ನಿರ್ದೇಶಕ ನೂರ್ಅಜಂ, ರಂಗನಾಥ ಸ್ವಾಮಿ ಗುಡ್ಡ ಕಾವಲ್ನ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿ ಡಾ.ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಹೇಮರಾಜ್, ಸಂತೇಪೇಟೆ ಸುರೇಶ್, ರೈತ ಮುಖಂಡ ಕರೀಗೌಡ, ಕೃಷಿ ಕಸ ಮಾಜದ ತಾಲೂಕು ಅಧ್ಯಕ್ಷ ಕೆ.ವಿಶ್ವನಾಥ್, ಪದಾಧಿಕಾರಿಗಳಾದ ಶಿವರಾಜ, ರಾಮಚಂದ್ರ, ರಂಗಸ್ವಾಮಿ, ಗಂಗಾಧರ, ಜಯರಾಜ, ಪ್ರಮುಖರಾದ ರೇಣುಕಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!