ಗುಬ್ಬಿ: ತಾಲ್ಲೂಕಿನ ಚೇಳೂರು ಹೋಬಳಿ ಸಮೀಪದ ಕುಂಟರಾಮನಹಳ್ಳಿ- ಚಿಕ್ಕ ಹೆಡಿಗೆಹಳ್ಳಿ ಮಾರ್ಗ ಮಧ್ಯದ ರಸ್ತೆ ಸೇತುವೆ ಅಡಿಯಲ್ಲಿ ಹುಲಿಯ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಹುಲಿ ಆವಾಸ ಸ್ಥಾನಕ್ಕೆ ಅಗತ್ಯ ಅರಣ್ಯ ಪ್ರದೇಶ ಇಲ್ಲ. ಈವರೆಗೂ ಹುಲಿ ಇರುವ ಬಗ್ಗೆ ಯಾರೂ ಖಚಿತಪಡಿಸಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿಯೂ ಈ ಬಗ್ಗೆ ಮಾಹಿತಿ ಇಲ್ಲ. ಆದರೆ ಮೃತ ದೇಹ ಪತ್ತೆಯಾಗಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಬೇರೆಡೆ ಕೊಂದು ಇಲ್ಲಿಗೆ ತಂದು ಹಾಕಿರಬಹುದೇ ಎಂಬ ಅನುಮಾನ ಕೂಡ ಮೂಡಿವೆ. ಮಂಚಲದೊರೆ ಸಮೀಪ ಕೃಷ್ಣಕಲ್ ಗುಟ್ಟೆ ಅರಣ್ಯ ಪ್ರದೇಶವಿದ್ದು, ಗುಹೆ, ಕಂದಕಗಳು ಇವೆ. ಕಾಡುಪ್ರಾಣಿಗಳ ಕಾಟ ಎಂಬ ಕಾರಣಕ್ಕೆ ಗ್ರಾಮಸ್ಥರು ಅರಣ್ಯ ಪ್ರದೇಶದತ್ತ ಹೋಗುವುದಿಲ್ಲ. ಬೆಟ್ಟ ಪ್ರದೇಶದಲ್ಲಿ ಒಂದೆರಡು ಬಾರಿ ಹುಲಿ ಕಾಣಿಸಿಕೊಂಡಿತ್ತು ಎಂದು ಕೆಲವರು ಹೇಳುತ್ತಾರೆ. ಸದ್ಯಕ್ಕೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಹುಲಿ ಕಾಯಿಲೆಯಿಂದ ಸಹಜವಾಗಿ ಸಾವನ್ನಪ್ಪಿರಬಹುದು. ಮೈಮೇಲೆ ಗಾಯದ ಗುರುತು ಕಂಡುಬಂದಿಲ್ಲ. ಹುಲಿ ಇಲ್ಲಿಗೆ ಹೇಗೆ ಬಂತು ಎಂಬುದು ನಮಗೂ ಆಶ್ಚರ್ಯವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಯಲ್ಲಿ ಹುಲಿ ಇದ್ದ ಬಗ್ಗೆ ಅನುಮಾನವಿದೆ. ಆದರೆ ಕೆಲವರು ನೋಡಿದ್ದರು ಎಂದು ಹೇಳುತ್ತಿದ್ದಾರೆ. ಸ್ಥಳ ಪರಿಶೀಲನೆ, ಹುಲಿಯ ಮರಣೋತ್ತರ ಪರೀಕ್ಷೆಯ ನಂತರ ಸ್ವಲ್ಪ ಮಟ್ಟಿಗೆ ಮಾಹಿತಿ ಲಭ್ಯವಾಗಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮಾ ತಿಳಿಸಿದ್ದಾರೆ.
Comments are closed.