ತುಮಕೂರು: ಪ್ರಸ್ತುತ ಶತಮಾನದಲ್ಲಿ ಕುಳಿತಲ್ಲೇ ಮಾಹಿತಿ ಪಡೆಯಬಹುದಾದಷ್ಟು ತಂತ್ರಜ್ಞಾನ ಮುಂದುವರೆದಿದೆ. ಸಂಶೋಧನೆ ನಡೆಸಲು ತಂತ್ರಜ್ಞಾನದ ಮೊರೆ ಹೊಕ್ಕರೆ ಪೂರಕವಾದ ಮಾಹಿತಿಗಳು ಸುಲಭವಾಗಿ ಪಡೆಯಬಹುದು. ಆದರೆ ಕಠಿಣ ಪರಿಶ್ರಮದಿಂದ ಸಂಶೋಧನೆ ನಡೆಸಿದಾಗ ಮಾತ್ರಉತ್ತಮ ಫಲಿತಾಂಶ ಸಿಗಲಿದೆ. ಇಂಥ ಸಂಶೋಧನೆಗಳಿಂದ ಸಮಾಜಕ್ಕೆ ಉತ್ತಮ ಮಾಹಿತಿ ನೀಡಬಹುದು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಸಮಾಜ ವಿಜ್ಞಾನದಲ್ಲಿ ಎಂಫಿಲ್, ಪಿಹೆಚ್ಡಿ ಮತ್ತು ಪಿಡಿಎಫ್ ಸಂಶೋಧನಾ ಅಭ್ಯರ್ಥಿಗಳಿಗೆ ಆಯೋಜಿಸಿದ್ದ ಹತ್ತು ದಿನಗಳ ಸಂಶೋಧನಾ ವಿಧಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಂಶೋಧನೆ ಹಿಂದಿನ ಕಾಲದಿಂದಲೂ ಇದೆ. ಅಂದು ಸರಿಯಾದ ತಂತ್ರಜ್ಞಾನ ಇಲ್ಲದ ಕಾರಣ ಸಂಶೋಧನೆಗಳಿಗೆ ಬಹಳ ಕಷ್ಟವಾಗಿತ್ತು. ಇಂದು ಹೆದರಬೇಕಾಗಿಲ್ಲ.
ಎಲ್ಲಾ ಮಾಹಿತಿಯನ್ನು ನಾವು ಕುಳಿತಲ್ಲೇ ಪಡೆಯಬಹುದು. ಉತ್ತಮ ಸಂಶೋಧನಾ ಪತ್ರಿಕೆಗಳು ಹೊರ ಬರಲು ಒಂದು ಉತ್ತಮ ಯೋಜನೆ ಹಾಕಿಕೊಳ್ಳಬೇಕು. ಗ್ರಂಥಾಲಯ ಮತ್ತು ಗೂಗಲ್ನಿಂದ ಮಾಹಿತಿ ಪಡೆಯುವುದಲ್ಲದೇ ಹೊಸ ತಂತ್ರಜ್ಞಾನ, ವೈಜ್ಞಾನಿಕ ವಿಧಾನದ ಜೊತೆಗೆ ಒಬ್ಬ ಉತ್ತಮ ಮಾರ್ಗದರ್ಶಕನ ಅವಶ್ಯಕತೆ ಬಹಳ ಮುಖ್ಯ ಎಂದು ತಿಳಿಸಿದರು.
ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಡಾ.ಡಿ.ರಾಜಶೇಖರ್ ವಿವಿಧ ವಿಶ್ವ ವಿದ್ಯಾಲಯಗಳ ಮೂವತ್ತು ಜನ ಸಂಶೋಧನಾ ಅಭ್ಯರ್ಥಿಗಳಿಗೆ ಕಾರ್ಯಾಗಾರ ಆರಂಭಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಜಯಶೀಲ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಲಾಸ್ ಎಂ.ಕಾದ್ರೋಳಕರ, ಡಾ.ರವೀಂದ್ರ ಕುಮಾರ್.ಬಿ, ಡಾ.ಮುನಿರಾಜು.ಎಂ, ಡಾ.ನೀಲಕಂಠ.ಎನ್. ಟಿ, ಡಾ.ಪಲ್ಲವಿ.ಎಸ್. ಕುಸುಗಲ್ಲ ಭಾಗವಹಿಸಿದ್ದರು.
Comments are closed.