ಕೊರಟಗೆರೆ: ಭಾರತದಲ್ಲಿ ಲಕ್ಷಾಂತರ ಜನರು ಪ್ರತಿ ವರ್ಷ ಪದವಿ, ಇಂಜಿನಿಯರ್, ಡಾಕ್ಟರ್ ಆಗುತ್ತಾರೆ. ಆದರೆ ಉದ್ಯೋಗ ಸಿಗುತ್ತಿಲ್ಲ. 60- 70 ವರ್ಷದ ಹಿಂದೆ ಎಸ್ಎಸ್ಎಲ್ಸಿ ಓದಿದ್ದರೆ ಸಾಕು ಸರ್ಕಾರವೇ ಮನೆ ಬಾಗಿಲಿಗೆ ಬಂದು ಉದ್ಯೋಗ ಕೊಡುತ್ತಿತ್ತು. ಈಗ ಪದವಿ ಆದರೂ ಸರ್ಕಾರಿ ಕೆಲಸ ಇಲ್ಲದೇ ಅದೆಷ್ಟೋ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಜಿ ಪರಮೇಶ್ವರ್ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಲಪ್ಪ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ 75 ವರ್ಷದಲ್ಲಿ ಭಾರತ ಪ್ರಪಂಚದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಸದೃಢವಾಗಿ ನಿಂತಿದೆ. ನಿಮ್ಮಂತಹ ಅದೆಷ್ಟೋ ವಿದ್ಯಾರ್ಥಿಗಳ ಅನೇಕ ಉದ್ಯೋಗ ಕಲ್ಪಿಸಿಕೊಂಡು ಮಾಡಿರುವ ಸಾಧನೆಯಿಂದಲೇ ಆಗಿರುವುದು. ಗ್ರಾಮೀಣ ಭಾಗದ ಮಕ್ಕಳು ವಿದೇಶಗಳಿಗೆ ಹೋಗಿ ಕೆಲಸ ಮಾಡುವುದಕ್ಕಿಂತ ವಾಸವಿರುವಂತಹ ಪ್ರದೇಶಗಳಲ್ಲೇ ಹೇಗೆ ಉದ್ಯೋಗ ಕಲ್ಪಿಸಿಕೊಳ್ಳಬೇಕು ಎಂಬುದು ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಕಂಪನಿಯ ಮುಖ್ಯಸ್ಥರು ತಿಳಿಸಿಕೊಡಲಿದ್ದಾರೆ ಎಂದು ಹೇಳಿದರು.
ದೇಶದ ಅಭಿವೃದ್ಧಿಗೆ, ಬೆಳವಣೆಗೆಗೆ ನಿಮ್ಮಿಂದ ಏನಾದರೂ ಸಹಾಯ ಆಗಬೇಕು ಎಂಬ ಉದ್ದೇಶ, ವರ್ಷಕ್ಕೊಮ್ಮೆ ಉದ್ಯೋಗ ಮೇಳ ಕಾರ್ಯಕ್ರಮ ನಡೆಯುವಂತೆ ಮಾಡುತ್ತೇನೆ. ದೊಡ್ಡ ಪ್ರಮಾಣದಲ್ಲಿ ದೊಡ್ಡ ದೊಡ್ಡ ಕಂಪನಿಗಳನ್ನು ಕರೆಸಿ ಮುಂದಿನ ದಿನಗಳಲ್ಲಿ ಕೊರಟಗೆರೆಯಲ್ಲಿ ಡಿಪ್ಲೋಮಾ ಇನ್ಸ್ಟಿಟ್ಯೂಟ್ ಶಿಕ್ಷಣ ಕೂಡ ಸಿಗುವಂತೆ ಮಾಡುವೆ ಎಂದು ಭರವಸೆ ನೀಡಿದರು.
ಕೌಶಲ್ಯಾಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಒಳ್ಳೆಯ ವಿದ್ಯಾಭ್ಯಾಸ, ಉದ್ಯೋಗ ಸಿಗಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಒಂದು ಸರ್ಕಾರಿ ಕೆಲಸ ಸಿಗಬೇಕು. ಉದ್ದಿಮೆದಾರನಾಗಿ ತನ್ನ ಕಂಪನಿಯಲ್ಲಿ ಹತ್ತಾರು ಜನಕ್ಕೆ ಕೆಲಸ ಕೊಡಬೇಕು. ವಿದೇಶಗಳಲ್ಲಿ ಕೆಲಸ ಮಾಡಬೇಕು ಎಂಬುದು ಪೋಷಕರ ಕನಸಾಗಿರುತ್ತದೆ. ನಮ್ಮ ಕ್ಷೇತ್ರದ ಯುವಕರು- ಯುವತಿಯರು ಅವರವರ ತಂದೆ- ತಾಯಿ ಕನಸ್ಸನ್ನು ನೆರೆವೇರಿಸಲೆಂದೇ ನಾವುಗಳು ಈ ಉದ್ಯೋಗ ಮೇಳ ಆಯೋಜಿಸಿರುವುದು. ಇದರಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಸಾವಿರಾರು ಸಂಖೈಯಲ್ಲಿ ಉದ್ಯೋಗಾಂಕ್ಷಿಗಳು ಭಾಗವಹಿಸಿ ನೋಂದಾಣಿ ಕೇಂದ್ರಗಳಲ್ಲಿ ಸಾಲುಗಟ್ಟಿ ಯುವಕ- ಯುವತಿಯರು ನಿಂತಿದ್ದರು. 70ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ ಆಯಾ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ನೀಡಲು ಮುಂದಾಗಿದ್ದು, ಬೆಳಗ್ಗೆ 9.30ರಿಂದ ಪ್ರಾರಂಭಗೊಂಡು ಸಂಜೆ 4 ಗಂಟೆಯವರೆಗೆ ಉದ್ಯೋಗ ಆಕಾಂಕ್ಷಿಗಳನ್ನು ನೋಂದಣಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ತಿಪ್ಪೇಸ್ವಾಮಿ, ಪ್ರಾಂಶುಪಾಲ ಡಾ.ಪ್ರಸನ್ನ ಕುಮಾರ್, ಎಸ್ಎಸ್ಐಟಿ ಪ್ಲೇಸ್ ಮೆಂಟ್ ಆಫೀಸರ್ ಆಶೋಕ್ ಮೆಹ್ತಾ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಾವಿರಾರು ಉದ್ಯೋಗಕಾಂಕ್ಷಿಗಳು ಇದ್ದರು.
Comments are closed.