ತುಮಕೂರು: ಸಂವಿಧಾನದ ಆಶಯದಂತೆ ಎಲ್ಲಾ ವರ್ಗ ಮತ್ತು ಜಾತಿಗಳಿಗೆ ರಾಜಕೀಯ ಅಧಿಕಾರ ನೀಡಿರುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ, ಹಾಗಾಗಿ ರಕ್ತಪಾತವಿಲ್ಲದ ಕ್ರಾಂತಿಯಾದ ಚುನಾವಣೆಯಲ್ಲಿ ಹಿಂದುಳಿದವರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವೊಲಿಸಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಒಬಿಸಿ ಘಟಕದ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆತ ಸಂದರ್ಭದಲ್ಲಿ ಸಣ್ಣ ಸಣ್ಣ ಜಾತಿಗಳನ್ನು ಗುರುತಿಸಿ ಮುಖ್ಯಮಂತ್ರಿಯಂತಹ ಹುದ್ದೆಗಳನ್ನು ನೀಡಿದೆ. ದೇವರಾಜ ಅರಸು, ಬಂಗಾರಪ್ಪ, ವೀರಪ್ಪಮೊಯಿಲಿ, ಧರ್ಮಸಿಂಗ್, ಸಿದ್ದರಾಮಯ್ಯ ಇವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಬೇರೆ ಪಕ್ಷಗಳಲ್ಲಿ ಈ ರೀತಿ ನಿಮ್ನ ವರ್ಗಗಳಿಗೆ ಅಧಿಕಾರ ಹಂಚಿದ ಉದಾಹರಣೆ ದೊರೆಯುವುದಿಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ಸುಮಾರು 95 ಜಾತಿಗಳನ್ನು ಒಳಗೊಂಡ ಓಬಿಸಿ ವರ್ಗಗಳು ಮತದಾರರೇ ನಿರ್ಣಾಯಕ. ಹೀಗಿದ್ದರೂ ಸಹ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷಗಳ ಇಲ್ಲದ ಭರವಸೆ, ಆಮೀಷಗಳಿಗೆ ಮಾರು ಹೋಗಿ ಓಬಿಸಿ ಮತದಾರರು ಬೇರೆ ಪಕ್ಷಗಳತ್ತ ವಾಲಿರುವುದೇ ಇದಕ್ಕೆ ಕಾರಣ. ಅವರಿಗೆ ತಿಳಿ ಹೇಳಿ ಓಬಿಸಿ ಸಮುದಾಯಗಳು ಎದುರಿಸುತ್ತಿರುವ ರಾಜಕೀಯ ಅಧಿಕಾರದ ಕೊರತೆ ನೀಗಿಸಲು ಕಾಂಗ್ರೆಸ್ ಪಕ್ಷವೊಂದರಿಂದಲೇ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಮುಂಬರುವ 2023ರ ಚುನಾವಣೆಯಲ್ಲಿ ಹಿಂದುಳಿದ ಸಮುದಾಯಗಳ ಹೆಚ್ಚು ಮತಗಳು ಕಾಂಗ್ರೆಸ್ ಪರವಾಗಿ ಬರುವಂತೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತಂದರೆ ಪಕ್ಷವೂ ಸಹ ನಿಮಗೆ ಮುಂದಿನ ತಾಪಂ, ಜಿಪಂ ಚುನಾವಣೆಗಳಲ್ಲಿ ಪರಿಗಣಿಸಲಿದೆ ಎಂದು ಸಲಹೆ ನೀಡಿದರು.
ಮುಂಬರುವ ವಿಧಾನಸಭಾ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಬಿಸಿ ಘಟಕದ ಪದಾಧಿಕಾರಿಗಳು ಸಕ್ರಿಯರಾಗಿ ಕೆಲಸ ಮಾಡಿದರೆ ನಿಮ್ಮ ಪರವಾಗಿ ನಿಲ್ಲಲು ನಾವು ಸಿದ್ಧರಿದ್ದೇವೆ. ನಿಮ್ಮ ಶಕ್ತಿ ಏನು ಎಂಬುದನ್ನು ನೀವು ತೋರಿಸಬೇಕಿದೆ. ಕಾಂಗ್ರೆಸ್ ಪಕ್ಷದ ಇತರೆ ಮುಂಚೂಣಿ ಘಟಕಗಳ ಮುಖಂಡರ ಜೊತೆ ಸೇರಿ ಪಕ್ಷ ಕಟ್ಟುವ ಕೆಲಸ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಲೆ ಇದೆ. ಅದನ್ನು ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್ನ ಒಬಿಸಿ ಘಟಕ ತಾಲೂಕು, ಹೋಬಳಿ ಮಟ್ಟದಲ್ಲಿ ಮುಖಂಡರ ಸಭೆಗಳನ್ನು ಮಾಡುವ ಮೂಲಕ ಮಾಡಬೇಕಿದೆ. ಅಹಿಂದ ವರ್ಗದ ಮತಗಳು ಕೋಮುವಾದಿ ಬಿಜೆಪಿ ಕಡೆಗೆ ಹೋಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ ಎಂದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಗುರುಪ್ರಸಾದ್ ಮಾತನಾಡಿ, ದಮನಿತರು ಭಾರತದಲ್ಲಿ ಇದುವರೆಗೂ ಶೋಷಿತರ ಪರವಾಗಿ ಕೆಲಸ ಮಾಡಿಕೊಂಡು ಬಂದಿರುವ ಪಕ್ಷವಿದ್ದರೆ ಅದು ಕಾಂಗ್ರೆಸ್, ಬಿಜೆಪಿಯ ಹಿಂದುತ್ವ ದ್ವೇಷಕ್ಕೆ ಹಿಂದುಳಿದ ವರ್ಗದ ಮಕ್ಕಳು ಬಲಿಯಾಗದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಅನಿಲ್ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಜವಾದ ಶಕ್ತಿಯೇ ಓಬಿಸಿ ಮತಗಳು, ಅವುಗಳ ಕಡಗಣನೆ ಮಾಡಿದ್ದೇ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಬಹುಮತ ಪಡೆಯಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಿಸಿದೆ. ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಎಲ್ಲಾ ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಒಗ್ಗೂಡಿಸುವ ಕೆಲಸ ಆಗಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಇದು ಚುನಾವಣಾ ವರ್ಷ, ಪಕ್ಷ ಹಿಂದುಳಿದ ವರ್ಗಗಳಿಗೆ ಅನೇಕ ಅವಕಾಶ ನೀಡಿದೆ. ಆದರೆ ಬಿಜೆಪಿಯ ಸುಳ್ಳು ಆಶ್ವಾಸನೆಗಳಿಗೆ ಮುಗಿಬಿದ್ದು, ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತಿರುವುದರಿಂದ ಸ್ವತಃ ಓಬಿಸಿ ಮತದಾರರೇ ನಷ್ಟ ಅನುಭವಿಸುತ್ತಿದ್ದಾರೆ. ಶಿರಾ ಉಪಚುನಾವಣೆ ಸಂದರ್ಭದಲ್ಲಿ ನೀಡಿದ ಕಾಡುಗೊಲ್ಲ ಅಭಿವೃದ್ಧಿ ನಿಗಮ, ಒಳ ಮೀಸಲಾತಿ ವರ್ಗೀಕರಣ ಭರವಸೆ ಈಡೇರಿತೇ ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಹಿಂದುಳಿದ ವರ್ಗಗಳು ಮೋಸ ಹೋಗಿರುವುದಕ್ಕೆ ಸಾಕ್ಷಿ ದೊರೆಯಲಿದೆ. ಹಾಗಾಗಿ ಜಿಲ್ಲೆಯಿಂದ ಬಂದಿರುವ ಎಲ್ಲಾ ಪದಾಧಿಕಾರಿಗಳು, ನಿಮ್ಮ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸಿ ಪಕ್ಷ ಸಂಘಟಿಸಲು ಮುಂದಾಗಬೇಕು. ಈ ಬಾರಿ ಅತಿ ಹೆಚ್ಚು ಹಿಂದುಳಿದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಲಿಂಗರಾಜು, ಕೆಪಿಸಿಸಿ ಓಬಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಮಣಿ, ಗುಬ್ಬಿ ತಾಲೂಕು ಅಧ್ಯಕ್ಷ ಗಂಗಾಧರ್, ಕೆಂಪಣ್ಣ ಮಾತನಾಡಿದರು. ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಓಬಿಸಿ ಘಟಕದ ಪದಾಧಿಕಾರಿಗಳು ಆಗಮಿಸಿದ್ದರು.
Comments are closed.