ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿಗಳು ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ನಿರೀಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿ ಇ- ಶ್ರಮ ಮತ್ತು ಕಟ್ಟ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಒದಗಿಸಲು ನೋಂದಣಿ ಅಭಿಯಾನವನ್ನು ಸ್ಲಂ ಗಳಿಗೆ ವಿಸ್ತರಿಸಬೇಕು ಎಂದು ಸ್ಲಂ ಸಮಿತಿ ನಿಯೋಗದೊಂದಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ನಿಯೋಗದ ಉಪಸ್ಥಿತಿ ವಹಿಸಿದ್ದ ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಮಾತನಾಡಿ, ಬಹುತೇಕ ಸ್ಲಂ ನಿವಾಸಿಗಳು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಜನ ತುಮಕೂರು ಜಿಲ್ಲೆಯಲ್ಲಿದ್ದಾರೆ. ಅದರಲ್ಲೂ ಅಘೋಷಿತ, ಘೋಷಿತ ಕೊಳಚೆ ಪ್ರದೇಶಗಳಲ್ಲಿ ನಗರದ ಅತೀ ಹೆಚ್ಚು ಶ್ರೀಮಂತರ ಮನೆಗಳಲ್ಲಿ ಮಹಿಳೆಯರು ಮನೆ ಕೆಲಸ, ಚೌಟರಿ ಸಹಾಯಕರ ಕೆಲಸ, ಪೈಂಟ್ ಕೆಲಸ, ಟೈಲರಿಂಗ್, ಬೀದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡಿರುವ ಜನರಿಗೆ ಕಾರ್ಮಿಕ ಇಲಾಖೆಯ ಸವಲತ್ತು ಸಿಗಬೇಕು ಮತ್ತು ಸಮಾಜದ ಕಟ್ಟಕಡೆಯ ಜನರಿಗೆ ಕಾರ್ಮಿಕ ಇಲಾಖೆ ಸವಲತ್ತು ತಲುಪಿಸಲು ಜಾಗೃತಿ ಸಭೆ ಆಯೋಜಿಸಬೇಕಿದೆ. ಸಾವಿರಾರು ಕೋಟಿ ಹಣ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ನೀಡುತ್ತಿದ್ದರು ಅದು ನಿಜವಾದ ಕಾರ್ಮಿಕರಿಗೆ ತಲುಪುವಲ್ಲಿ ವಿಫಲವಾಗುತ್ತಿದೆ. ಸ್ಲಂ ನಿವಾಸಿಗಳನ್ನು ಇಲಾಖೆ ಕಡೆಗಣಿಸದೆ ಉಚಿತ ನೋಂದಣಿ ಅಭಿಯಾನ ಕೈಗೊಳ್ಳಬೇಕು. ಇ- ಶ್ರಮ ಮತ್ತು ಅಂಬೇಡ್ಕರ್ ಸಹಾಯಸ್ತ ಯೋಜನೆ ನೇರವಾಗಿ ಸ್ಲಂ ನಿವಾಸಿಗಳಿಗೆ ತಲುಪುವಂತೆ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿ ವೆಂಕಟೇಶ್ಬಾಬು ತುಮಕೂರು ಕೊಳಗೇರಿ ಸಮಿತಿ ಸ್ಲಂ ನಿವಾಸಿಗಳ ಅಭಿವೃದ್ಧಿಗೆ ಕಾರ್ಮಿಕ ಸೌಲಭ್ಯ ಬಹಳ ಮುಖ್ಯ, ನೋಂದಣಿ ಅಭಿಯಾನ ಕೈಗೊಳ್ಳಿ ಎಂಬ ಬೇಡಿಕೆ ಸಂವಿಧಾನ ಬದ್ಧವಾಗಿದೆ ಮತ್ತು ಸ್ಲಂ ಸಮಿತಿಯ ಸಹಕಾರದೊಂದಿಗೆ ತುರ್ತು 5 ಸ್ಲಂಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡುತ್ತೇವೆ. ಇಲಾಖೆಯ ಸಿಬ್ಬಂದಿಯೊಂದಿಗೆ ಭೇಟಿ ಮಾಡಿ ಸ್ಲಂನಲ್ಲಿ ವಾಸಿಸುವ ಎಲ್ಲಾ ಬಡವರಿಗೂ ಇಲಾಖೆಯಿಂದ ಉಚಿತವಾಗಿ ಇ- ಶ್ರಮ ಮತ್ತು ಇತರೆ ನಿರ್ಮಾಣ ವಲಯದ ಕಾರ್ಮಿಕರಿಗೆ ನೋಂದಣಿ ಮಾಡಿಸುವ ಕಾರ್ಯ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ತಿರುಮಲಯ್ಯ, ಕೋಡಿಹಳ್ಳ ಸ್ಲಂ ಶಾಖೆಯ ಗಣೇಶ್, ಮಂಜುನಾಥ್, ನವೀನ್ಕುಮಾರಿ, ಲಕ್ಷ್ಮಮ್ಮ ಹಾಗೂ ಸಂಪಾಧನೆ ಮಠ ಸ್ಲಂ ಶಾಖೆಯ ಲಕ್ಷ್ಮೀಪತಿ, ಮಹೇಶ್, ಸುಬ್ರಮಣಿ, ಎನ್.ಆರ್.ಕಾಲೋನಿಯ ಮೋಹನ್.ಟಿ.ಆರ್. ಮುಂತಾದವರು ಪಾಲ್ಗೊಂಡಿದ್ದರು.
Comments are closed.