ಹೈನುಗಾರಿಕೆ ರೈತರ ಬದುಕಿಗೆ ಆಸರೆಯಾಗುತ್ತೆ: ಎಸ್.ಆರ್.ಗೌಡ

152

Get real time updates directly on you device, subscribe now.


ಶಿರಾ: ಬಯಲು ಸೀಮೆಯ ಆಸರೆಯ ಕಸುಬು ಹೈನುಗಾರಿಕೆ. ಕೃಷಿಕರು ಈ ಪವಿತ್ರವಾದ ಹೈನುಗಾರಿಕೆ ಕಸುಬು ಮಾಡುವುದರಿಂದ ಆರ್ಥಿಕ ಸದೃಢತೆ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಈ ಕಸುಬು ರೈತರನ್ನು ಸ್ವಾವಲಂಬಿಯಾಗಿ ಬದುಕಲು ದಾರಿ ಮಾಡಿಕೊಡುತ್ತದೆ ಎಂದು ತುಮುಲ್ ನಿರ್ದೇಶಕ ಎಸ್. ಆರ್.ಗೌಡ ತಿಳಿಸಿದರು.

ಗುರುವಾರ ಶಿರಾ ತಾಲೂಕಿನ ತಡಕಲೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಗೆ ಶಕ್ತಿ ತುಂಬುವ ಸಲುವಾಗಿ ಜಿಲ್ಲಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತೆರೆಯಲಾಗಿದೆ. ಮೊದಲು 650 ಸಹಕಾರ ಸಂಘಗಳಿದ್ದವು, ಈಗ ಅವುಗಳ ಸಂಖ್ಯೆ 1300 ಕ್ಕೂ ಹೆಚ್ಚಾಗಿ ದ್ವಿಗುಣಗೊಂಡಿವೆ. ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿಮಾ ಸೌಲಭ್ಯ, ರಾಸುಗಳು ಮೃತ ಪಟ್ಟರೆ ಪರಿಹಾರ, ಹೆಣ್ಣು ಮಕ್ಕಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ, ರಾಸುಗಳಿಗೆ ಉಚಿತ ವಿಮೆ ಹೀಗೆ ಹಲವಾರು ಯೋಜನೆ ರೂಪಿಸುವುದರ ಮೂಲಕ ಹೈನುಗಾರಿಕೆಗೆ ಶಕ್ತಿ ತುಂಬಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ನಾನು ಪಶು ಸಂಗೋಪನಾ ಸಚಿವನಾಗಿದ್ದಾಗ ಹೈನುಗಾರಿಕೆ ಅಭಿವೃದ್ಧಿ ಪಡಿಸಲು ಪಶುಭಾಗ್ಯ ಹಾಗೂ ಕ್ಷೀರ ಭಾಗ್ಯ ಎಂಬ ಎರಡು ಮಹತ್ವದ ಯೋಜನೆ ಜಾರಿಗೆ ತಂದಿದ್ದೆ. ಪಶು ಭಾಗ್ಯ ಯೋಜನೆ ಅಡಿ ಬಡವರಿಗೆ 1 ಲಕ್ಷ ರೂ. ವೆಚ್ಚದ ಎರಡು ಹಸು ನೀಡುವುದು. ಆ ಸಮಯದಲ್ಲಿ ಸಮೃದ್ಧಿ ಮಳೆಯಾಗಿ ಹಾಲಿನ ಉತ್ಪಾದನೆ ಹೆಚ್ಚಾಗಿ ರೈತರಿಂದ ಹಾಲು ಖರೀದಿಸುವುದನ್ನು ನಿಲ್ಲಿಸಬೇಕು ಎಂಬ ವಿಷಯ ಪ್ರಸ್ತಾವನೆಯಾದಾಗ ನಾನು ಹಾಲನ್ನು ಪೌಡರ್ ಮೂಲಕ ಶೇಖರಿಸಬಹುದು ಎಂದು ಅದಕ್ಕೆ ಒತ್ತು ನೀಡಿದ್ದೆ. ಕ್ಷೀರ ಭಾಗ್ಯ ಯೋಜನೆಯಡಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಹಾಲಿನ ಪೌಡರ್ ವಿತರಿಸಲಾಯಿತು ಎಂದು ತಿಳಿಸಿದರು.

ಸಮಾರಂಭದಲ್ಲಿ ರೈತರಿಗೆ ಪ್ರತಿಷ್ಠೆಯ ಆಸ್ಪತ್ರೆಯ ನುರಿತ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಹೆಣ್ಣು ಕರಗಳ ಪ್ರದರ್ಶನ, ಸಾಧಕರಿಗೆ ಸನ್ಮಾನ, ಯಶಸ್ವಿನಿ ಸ್ಮಾರ್ಟ್ ಕಾರ್ಡ್ ವಿತರಣೆ, ಚೆಕ್ ವಿತರಣೆ ಹಾಗೂ ಸದಸ್ಯರಿಗೆ ಗುರುತಿನ ಚೀಟಿ ನೀಡಲಾಯಿತು.

ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ವ್ಯವಸ್ಥಾಪಕ ನಿರ್ದೇಶಕ ಬಿ.ಪಿ.ಸುರೇಶ್, ತಡಕಲೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಹಳೆ ಮನೆ ಶಿವನಂಜಪ್ಪ, ಜಿ.ಎಸ್.ರವಿ, ಮದ್ದೆವಳ್ಳಿ ರಾಮಕೃಷ್ಣ, ಮಾಜಿ ತಾಲೂಕ ಪಂಚಾಯತ್ ಉಪಾಧ್ಯಕ್ಷ ರಂಗನಾಥ್ ಗೌಡ, ಮಾಜಿ ಸೂಡಾ ಅಧ್ಯಕ್ಷ ಈರಣ್ಣ, ಸಂತೆಪೇಟೆ ನಟರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮಣಿ ಬೀರಲಿಂಗಪ್ಪ, ಉಪಾಧ್ಯಕ್ಷೆ ಸುಶೀಲಮ್ಮ ಗುರುಮೂರ್ತಿ, ಚಂದ್ರಶೇಖರ್, ರಮೇಶ್, ಶ್ರೀನಾಥ್, ಪಿಡಿಒ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!