ಪೊಲೀಸರ ವಶದಲ್ಲಿದ್ದ ಕಳ್ಳತನ ಆರೋಪಿ ಸಾವು

197

Get real time updates directly on you device, subscribe now.


ಹುಳಿಯಾರು: ಹುಳಿಯಾರು ಪೊಲೀಸರ ವಶದಲ್ಲಿದ್ದ ವ್ಯಕ್ತಿಯೋರ್ವ ಕಣಕಟ್ಟೆ ಆಸ್ಪತ್ರೆಯಲ್ಲಿ ಸಾವನನ್ನಪ್ಪಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಹುಳಿಯಾರು ಸಮೀಪದ ಕೆಂಕೆರೆಯ ಕಾಳಮ್ಮನ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆಂದು ಅನುಮಾನಿಸಿ ಬಳ್ಳಾರಿ ಮೂಲದ ಐವರನ್ನು ಹುಳಿಯಾರು ಪೊಲೀಸರು ವಶಪಡಿಸಿಕೊಂಡು ತನಿಖೆ ಮಾಡುತ್ತಿದ್ದರು. ಐವರಲ್ಲಿ ಬಳ್ಳಾರಿ ಮೂಲದ ಯಲ್ಲಪ್ಪ (38) ಎಂಬಾತ ಕಳ್ಳತನದ ಮಾಲು ಇಟ್ಟಿರುವ ಸ್ಥಳ ತೋರಿಸುತ್ತೇನೆ ಎಂದು ಹೇಳಿದಾಗ ಪೊಲೀಸರು ಆತನನ್ನು ಕರೆದೊಯ್ಯುವಾಗ ಪಂಚನಹಳ್ಳಿ- ಬಾಣವಾರ ಮಾರ್ಗ ಮಧ್ಯೆ ಬುಧವಾರ ಸಂಜೆ 4 ಗಂಟೆಗೆ ಎದೆ ನೋವು ಕಾಣಿಸಿಕೊಂಡಿತು.

ಕೂಡಲೇ ಕಡೂರು ತಾಲೂಕಿನ ಪಂಚನಹಳ್ಳಿ ಬಳಿಯ ಕಣಕಟ್ಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸದ್ದಾರೆ. ವೈದ್ಯರು ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೆ ಯಲ್ಲಪ್ಪ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಗುರುವಾರ ಬೆಳಗ್ಗೆಯಿಂದ ಲಾಕಪ್ ಡೆತ್ ಎಂಬ ಸುದ್ದಿ ಹರಿದಾಡಿತ್ತು.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಹುಲ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಸ್ಪಷ್ಟನೆ ನೀಡದ್ದು ಈ ಪ್ರಕರಣ ನಡೆದಿರುವುದು ನಿಜ. ದೇವಾಲಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಬಾಣಾವರದ ಚಿನ್ನಾಭರಣದ ಅಂಗಡಿಗೆ ಕದ್ದಿದ್ದ ದೇವರ ಒಡವೆಗಳನ್ನು ನೀಡಿದ್ದಾಗಿ ಯಲ್ಲಪ್ಪ ಹೇಳಿಕೆ ನೀಡಿದ್ದರು. ರಿಕವರಿಗೆ ಕರೆದುಕೊಂಡು ಹೋಗುವಾಗ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದಿದ್ದಾರೆ.

ಕಣಕಟ್ಟೆ ಆಸ್ಪತ್ರೆ ವೈದ್ಯ ಡಾ.ರಂಗನಾಥ್ ಮಾತನಾಡಿ, ಹುಳಿಯಾರು ಪೊಲೀಸರು ಯಲ್ಲಪ್ಪ ಎಂಬುವವರನ್ನು ಎದೆ ನೋವಿನ ಕಾರಣದಿಂದ ಆಸ್ಪತ್ರೆಗೆ ಕರೆತಂದಿದ್ದರು, ತಪಾಸಣೆ ಮಾಡಿದಾಗ ಬಿಪಿ ಕಡಿಮೆಯಿತ್ತು. ಆತನೂ ಸಹ ತೀವ್ರ ಎದೆ ನೋವು ಆಗುತ್ತಿದೆ ಎಂದು ಹೇಳುತ್ತಿದ್ದ, ಈ ಸಂದರ್ಭದಲ್ಲಿ ನೀರು ಕೇಳಿದ, ಎರಡು ಹನಿಗಳನ್ನು ನಾಲಿಗೆಯ ಮೇಲೆ ಹಾಕಿದೆ. ತಕ್ಷಣ ನನ್ನ ಕೈ ಮೇಲೆಯೇ ಕೊನೆಯುಸಿರು ಎಳೆದನು. ಆತನ ಕುಟುಂಬದವರು, ಪೊಲೀಸರು ಹೆಚ್ಚಿನ ವಿವರ ಪಡೆದು ಹಾಸನ ಜಿಲ್ಲಾಸ್ಪತ್ರೆಗೆ ಮೃತ ದೇಹವನ್ನು ತೆಗೆದುಕೊಂಡು ಹೋದರು. ಮೃತ ವ್ಯಕ್ತಿಯ ಮೈ ಮೇಲೆ ಯಾವುದೇ ಹೊಸ ಗಾಯ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!