ಶಾಸಕ ರಂಗನಾಥ್ ವಿರುದ್ಧ ಬುಸುಗುಟ್ಟಿದ ಬಿಬಿಆರ್

ಒಂದೇ ವೇದಿಕೆಯಲ್ಲಿ 3 ಪಕ್ಷದ ನಾಯಕರ ಭರ್ಜರಿ ಭಾಷಣ

102

Get real time updates directly on you device, subscribe now.


ಕುಣಿಗಲ್: ಪಟ್ಟಣದಲ್ಲಿ ನಡೆದ ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ದಿನಾಚರಣೆ ಮೂರು ಪ್ರಮುಖ ಪಕ್ಷಗಳ ಪ್ರಚಾರಕ್ಕೆ ವೇದಿಕೆಯಾಗುವ ಜೊತೆಯಲ್ಲಿ ಕಾಂಗ್ರೆಸ್ ಶಾಸಕರ ಭರವಸೆಯನ್ನು ಅವರದ ಪಕ್ಷದ ಮಾಜಿ ಶಾಸಕ ಟೀಕಿಸಿದ ಘಟನೆಯೂ ನಡೆಯಿತು.

ತಾಲೂಕು ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗುರುವಾರ ಖಾಸಗಿ ಸಮುದಾಯ ಭವನದಲ್ಲಿ ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ರಂಗನಾಥ್, ಬೀದಿಬದಿ ವ್ಯಾಪಾರಿಗಳಿಗೆ ವಸತಿ ನೀಡಲು ಬಡ್ಡಿ ರಹಿತ ಸಾಲ ನೀಡಲು ಹಾಗೂ ಅವರಿಗೆ ಇಎಸ್ಐ ಕಾರ್ಡ್ ನೀಡಲು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲು ಶ್ರಮಿಸುವುದಾಗಿ ವ್ಯಾಪಾರಿಗಳಿಗೆ ಮುಂದಿನ ವರ್ಷದಲ್ಲಿ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಲು ಮುಂದೆ ಗೆಲ್ಲುವ ಶಾಸಕರಿಗೆ ಮನವಿ ಮಾಡುವುದಾಗಿ ಹೇಳಿದರೆ, ಕಾಂಗ್ರೆಸ್ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರು ವೇದಿಕೆಯಲ್ಲಿರುವ ಎಲ್ಲಾ ಮುಖಂಡರ ಅನಿಸಿಕೆ ಬೀದಿಬದಿ ವ್ಯಾಪಾರಿಗಳ ಹಿತರಕ್ಷಣೆ ಆಗಿದೆ. ಹಾಗಂತ ಸುಳ್ಳು ಭರವಸೆ ನೀಡಿ ವ್ಯಾಪಾರಿಗಳಿಗೆ ಪೌಡರ್, ಮೇಕಪ್ ಹಾಕುವ ಕೆಲಸ ನಾನು ಮಾಡುವುದಿಲ್ಲ. ನಮ್ಮದೇನಿದ್ದರೂ ನೇರ ನುಡಿ, ಕಾರ್ಯಕ್ರಮದಲ್ಲಿ ಖಚಿತವಾಗಿ ಭರವಸೆ ನೀಡಬೇಕಾದ್ದು ಪುರಸಭಾಧ್ಯಕ್ಷ, ಶಾಸಕರು, ಆದರೆ ಇನ್ನೇನು ಚುನಾವಣೆ ಇರುವ ಕಾರಣ ಎರಡು ತಿಂಗಳಲ್ಲಿ ಏನು ಮಾಡಲಾಗದು. ಆದರೂ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಪಟ್ಟಣದ ನಾಗರಿಕರಿಗೆ ವಸತಿ ಯೋಜನೆ ಕಲ್ಪಿಸಲು ತಾವು ಶಾಸಕರಿದ್ದಾಗ ಶ್ರಮಿಸಿದ್ದು ಇನ್ನು ಆಗಿಲ್ಲ ಎಂದರು. ಇದಕ್ಕೆ ಹಾಲಿ ಶಾಸಕರು ಜಾಗ ಗುರುತಿಸಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂಬ ಸಮಜಾಯಿಷಿ ನೀಡಿದರು.

ಜೆಡಿಎಸ್ ವರಿಷ್ಠ, ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಮಾಜಿ ಸಿಎಂ ಕುಮಾರ ಸ್ವಾಮಿಯವರು ಪಂಚರತ್ನ ಯೋಜನೆಯಡಿಯಲ್ಲಿ ಹೇಳಿರುವಂತೆ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಬೀದಿ ವ್ಯಾಪಾರಿಗಳಿಗೆ 20 ಸಾವಿರದಿಂದ ಒಂದು ಲಕ್ಷದವರೆಗೂ ಬಡ್ಡಿ ರಹಿತ ಸಾಲ ಸಿಗುವ ಜೊತೆಯಲ್ಲಿ ಉತ್ತಮ ಆರೋಗ್ಯವ್ಯವಸ್ಥೆ ಜಾರಿಗೊಳಿಸಲಾಗುವುದು. ವಸತಿ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಅವಧಿಯಲ್ಲಿ ಮಲ್ಲಾಘಟ್ಟ ಜಾಗವನ್ನು ಹೆಣ್ಣು ಮಕ್ಕಳಿಗಾಗಿಯೆ ಪಟ್ಟಣದ ವ್ಯಾಪ್ತಿಯಲ್ಲಿ ಪ್ರತ್ಯೇಕ ಸರ್ಕಾರಿ ಪ್ರಥಮ ದರ್ಜೆ ನಿರ್ಮಾಣಕ್ಕೆ ಗುರುತಿಸಿದ್ದು ಈಗಿನ ಶಾಸಕರು ಅದನ್ನುಕಡೆಗಣಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಈಗಾಗಲೆ ಕೇಂದ್ರ ಸರ್ಕಾರದ ಯೋಜನೆಯಡಿ ಸಾಲ ಸೌಲಭ್ಯ ಸಿಗುತ್ತಿದ್ದು ಬಹುತೇಕರು ಸಾಲ ಮರುಪಾವತಿ ಮಾಡದೆ ಇರುವುದು ಒಳ್ಳೆಯದಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಎಲ್ಲಾ ರೀತಿಯ ಸವಲತ್ತು ಸಿಗಲಿದೆ ಎಂದರು.

ಬಿಜೆಪಿ ಮುಖಂಡ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, 19 ವರ್ಷಗಳ ಹಿಂದೆ ಪಟ್ಟಣದಲ್ಲಿ ನಮ್ಮ ಅವಧಿಯಲ್ಲಿ ನಿವೇಶನ ನೀಡಿದ್ದು ಬಿಟ್ಟರೆ ಇನ್ನಾರೂ ನೀಡಿಲ್ಲ. ಇದಕ್ಕೆ ಕಾರಣ ಏನೆಂದು ಪ್ರಶ್ನಿಸುವುದಿಲ್ಲ. ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಲವು ಯೋಜನೆಗಳ ಮೂಲಕ ಸವಲತ್ತು ನೀಡುತ್ತಿದೆ. ಇದರಲ್ಲಿ ಕೇವಲ 584 ಮಂದಿ ನೋಂದಾಯಿಸಿ ಕೊಂಡಿದ್ದು ಮತ್ತಷ್ಟು ಮಂದಿ ಇದ್ದು ಎಲ್ಲರೂ ನೋಂದಾಯಿಸಿಕೊಳ್ಳುವ ಜೊತೆಯಲ್ಲಿ ಸಮಸ್ಯೆಗಳ ನಿವಾರಣೆಗೆ ಸಂಘಟಿತರಾಗಿ ಧ್ವನಿ ಎತ್ತಬೇಕು. ನಿಮ್ಮ ಬಗ್ಗೆ ಚಿಂತಿಸಿ ಕಾರ್ಯಕ್ರಮ ನೀಡುವವರಿಗೆ ಸಹಕಾರ ನೀಡಬೇಕೆಂದರು.

ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಮಾತನಾಡಿ, ಕುಣಿಗಲ್ ಶಾಸಕರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಅಧಿಕಾರ ಮುಗಿಯುವ ಹಂತದಲ್ಲಿ ಈಗ ಬಡವರಿಗೆ ನಿವೇಶನ ನೀಡುವ ಬಗ್ಗೆ ಕಾಳಜಿ ಬಂದಿದೆ. ಬೀದಿಬದಿ ವ್ಯಾಪಾರಿಗಳಿಗೆ ಪಟ್ಟಣದಲ್ಲಿ ವ್ಯವಸ್ಥೆಗೊಳಿಸಲು ಹಲವು ಜಾಗವಿದ್ದರೂ ಅವುಗಳ ಬಗ್ಗೆ ಕಾಳಜಿ ಇಲ್ಲದೆ ನಿರ್ಲಕ್ಷ್ಯಸಿ ಇದೀಗ ಇಲ್ಲಸಲ್ಲದ ಯೋಜನೆ ಕೊಡುತ್ತೇವೆಂದು ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿಯ ರಾಜ್ಯ, ಕೇಂದ್ರ ಸರ್ಕಾರಗಳು ಮಾತ್ರ ಬೀದಿಬದಿ ವ್ಯಾಪಾರಿಗಳ ಬಗ್ಗೆ ಚಿಂತನೆ ನಡೆಸಿ ಯೋಜನೆ ಜಾರಿಗೊಳಿಸಿವೆ ಎಂದರು.

ಬಿಜೆಪಿ ಮುಖಂಡ ರಾಜೇಶ್ ಗೌಡ, ಬೀದಿಬದಿ ವ್ಯಾಪಾರಿಗಳು ಕಷ್ಟದ ನಡುವೆ ಜೀವನ ನಡೆಸುವ ಶ್ರಮಜೀವಿಗಳು. ಅವರ ಬಗ್ಗೆ ಚಿಂತಿಸಿ ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಧ್ವನಿಯಾಗಿ ಯೋಜನೆ ಜಾರಿಗೊಳಿಸಿದ್ದೇ ಬಿಜೆಪಿ ಸರ್ಕಾರಗಳು ಎಂದರು.

ಬೀದಿಬದಿ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಂಗಸ್ವಾಮಿ, ಜಿಲ್ಲಾಧ್ಯಕ್ಷ ಭದ್ರೇಗೌಡ, ಉಪಾಧ್ಯಕ್ಷ ಮಂಜಣ್ಣ, ತಾಲೂಕು ಅದ್ಯಕ್ಷ ಧನಂಜಯ, ಪುರಸಭೆ ಉಪಾಧ್ಯಕ್ಷ ಶಬನಾ ತಬಸ್ಸುಮ್, ಸದಸ್ಯರಾದ ಮಂಜುಳಾ, ರೂಪಿಣಿ, ಜಯಲಕ್ಷ್ಮೀ, ಸಮೀವುಲ್ಲಾ, ನಾಗೇಂದ್ರ, ಗೋಪಿ, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ, ಪುರಸಭೆ ಮಾಜಿ ಸದಸ್ಯ ಜಗದೀಶ್, ಜೆಡಿಎಸ್ ಮುಖಂಡ ಕೃಷ್ಣೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!