ತುಮಕೂರು: ಸಿದ್ಧಗಂಗಾ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಹೃದಯ ಸ್ಪರ್ಶಿಯಾಗಿ ಪ್ರತಿಯೊಬ್ಬ ರೋಗಿಯನ್ನೂ ಆರೈಕೆ ಮಾಡಬೇಕು ಆಗ ಮಾತ್ರ ನಮ್ಮ ಆಸ್ಪತ್ರೆ ನಿರ್ಮಾಣದ ಉದ್ಧೇಶ ಸಾರ್ಥಕವಾಗುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಹೊರ ರೋಗಿಗಳ ವಿಭಾಗ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆಯೇ ಒಂದು ಕುಟುಂಬ ಎನ್ನುವ ಭಾವನೆಯನ್ನು ಎಲ್ಲರೂ ಹೊಂದಿ ಕರ್ತವ್ಯ ನಿರ್ವಹಿಸಿಬೇಕು. ಈಗಾಗಲೇ ನೀಡುತ್ತಿರುವ ಉಚಿತ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಗತ್ಯ ಉಳ್ಳವರಿಗೆ ತಲುಪುವಂತೆ ಮಾಡಬೇಕು. ಸಿದ್ಧಗಂಗಾ ಮಠದ ದಾಸೋಹ ಪರಂಪರೆಯನ್ನು ಆರೋಗ್ಯ ಕ್ಷೇತ್ರದಲ್ಲೂ ವಿಸ್ತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಸಿದ್ಧಗಂಗಾ ಮಠದ ಕಾರ್ಯದರ್ಶಿ ಟಿ.ಕೆ.ನಂಜುಡಪ್ಪ ಮಾತನಾಡಿ ಆಸ್ಪತ್ರೆಯನ್ನು ವ್ಯವಹಾರಿಕವಾಗಿ ಕಾಣದೆ ಸೇವೆ ನೀಡುವ ಒಂದು ಅವಕಾಶವಾಗಿ ಪರಿಗಣಿಸಿದ ಶ್ರೀಗಳಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು ಎನ್ನುವ ಗುರಿಯಿದೆ. ಅದನ್ನು ಸಾಕಾರಗೊಳಿಸ ಬೇಕಿರುವುದು ನಮ್ಮ ಕರ್ತವ್ಯ ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ನೂತನವಾಗಿ ಪ್ರಾರಂಭವಾದ ಹೊರ ರೋಗಿಗಳ ವಿಭಾಗದಲ್ಲಿ ಎಲ್ಲಾ ವೈದ್ಯರು ದಿನಪೂರ್ತಿ ಉಚಿತವಾಗಿ ರೋಗಿಗಳ ಸಂದರ್ಶನಕ್ಕೆ ಲಭ್ಯವಿರಲಿದ್ದಾರೆ. ಈಗಾಗಲೇ ಉಚಿತ ಆಹಾರ, ಹಾಸಿಗೆಯನ್ನೂ ರೋಗಿಗಳಿಗೆ ಕಲ್ಪಿಸಿದ್ದು ಸಾರ್ವಜನಿಕರು ನೂತನ ಬ್ಲಾಕ್ನ ಸೇವೆ ಪಡೆಯಬೇಕು ಎಂದರು.
ಮೆಡಿಕಲ್ ಕಾಲೇಜಿನ ಕಾರ್ಯಕಾರಿ ನಿರ್ದೇಶಕ ಡಾ.ಎಸ್.ಸಚ್ಚಿದಾನಂದ್ ಮಾತನಾಡಿ, ಆಸ್ಪತ್ರೆ ನಿರ್ಮಾಣದಲ್ಲಿ ಸ್ವಾಮೀಜಿಯವರಿಗೆ ಇರುವ ಆಸಕ್ತಿಯ ಫಲವಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಉಚಿತ ಸೇವೆ ಕೂಡ ವಿಶ್ವದರ್ಜೆಯ ಸೌಲಭ್ಯಗಳನ್ನೇ ಒದಗಿಸುತ್ತಿರುವುದು ಆಸ್ಪತ್ರೆಯ ಕಾರ್ಯಶೀಲತೆಗೆ ಕನ್ನಡಿಯಾಗಿದೆ ಎಂದರು.
ಎಸ್ಐಟಿ ಸಿಇಓ ಡಾ.ಶಿವಕುಮಾರಯ್ಯ, ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನ ಮೂರ್ತಿ, ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್.ಹೆಚ್.ಎಂ, ಹೃದ್ರೋಗ ತಜ್ಞ ಶರತ್ಕುಮಾರ್, ಸಿಇಓ ಡಾ.ಸಂಜೀವ ಕುಮಾರ್ ಸೇರಿದಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.
Comments are closed.