ಕುಂಬಾರಿಕೆ ಸರ್ವ ಶ್ರೇಷ್ಠ ಕಲೆ: ಸಿದ್ದಲಿಂಗಪ್ಪ

ಕುಂಬಾರ ಸಮುದಾಯ ಶ್ರಮ ಸಂಸ್ಕೃತಿಯ ಸಮಾಜ

280

Get real time updates directly on you device, subscribe now.


ತುಮಕೂರು: ಕುಂಬಾರ ಸಮಾಜ ಕುಂಬಾರಿಕೆಯನ್ನೇ ತಮ್ಮ ಕುಲಕಸಬುನ್ನಾಗಿ ಮಾಡಿಕೊಂಡು ಬಂದಿರುವ ಶ್ರಮ ಸಂಸ್ಕೃತಿಯ ಸಮಾಜ, ಇತರೆ ಕುಲಕಸುಬುಗಳಂತೆ ಕುಂಬಾರಿಕೆ ಕೂಡ ಉನ್ನತ ಸ್ತರದಲ್ಲಿ ನಿಲ್ಲಬಹುದಾದ ವೃತ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾ ನಗರಪಾಲಿಕೆ ತುಮಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀಕುಂಬಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೇಗೆ ಶಿಲ್ಪಿ ಒಂದು ಕಲ್ಲನ್ನು ಶಿಲ್ಪವಾಗಿಸುವ ಮುನ್ನ ತನ್ನ ತಲೆಯಲ್ಲಿ ಮೂರ್ತ ರೂಪ ಇಟ್ಟುಕೊಳ್ಳುತ್ತಾನೋ ಆದೇ ರೀತಿ ಕುಂಬಾರಿಕೆ ವೃತ್ತಿ ಮಾಡುವವರು ಸಹ ಒಂದು ಮಡಿಕೆ ಅಥವಾ ಮಡಿಕೆ ಕಲೆ ಮಾಡುವ ಸಂದರ್ಭದಲ್ಲಿ ತಮ್ಮ ಮನದಲ್ಲಿ ಮೊದಲು ಅದರ ಆಕೃತಿ ರೂಪಿಸಿಕೊಂಡು ಅದಕ್ಕೆ ಮಣ್ಣಿನಲ್ಲಿ ರೂಪ ಕೊಡುವ ಕೆಲಸ ಮಾಡುತ್ತಾರೆ. ಹಾಗಾಗಿಯೇ ಇದು ಸರ್ವ ಶ್ರೇಷ್ಠ ಕಲೆಯಾಗಿದೆ ಎಂದರು.

ಸರ್ವಜ್ಞನೇನು ಗರ್ವದಿಂದಾದವನೇ, ಎಲ್ಲರೊಳಗೊಂದು ನುಡಿಯ ಕಲಿತು ಸರ್ವಜ್ಞನೇ ಆದ ನೋಡ ಎಂಬ ಹಿರಿಯರ ಮಾತನ್ನು ಗಮನಿಸುವುದಾದರೆ ಎಲ್ಲಾ ಜಾತಿ, ಧರ್ಮಗಳ ಅನುಭಾವಿಗಳನ್ನೇ ಒಳಗೊಂಡಿದ್ದ ಅನುಭವ ಮಂಟಪದಲ್ಲಿ ಗುರುತಿಸಿಕೊಂಡು ತನ್ನ ತ್ರಿಪದಿಗಳ ಮೂಲಕ ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದಿ, ತೀಡಲು ಪ್ರಯತ್ನಿಸಿದ ಸರ್ವಜ್ಞನ ನುಡಿಮುತ್ತುಗಳಿಗೂ ಸರ್ವ ಕಾಲಕ್ಕೂ ಶ್ರೇಷ್ಠ, ಅವುಗಳನ್ನು ನಾವು ಅರ್ಥ ಮಾಡಿಕೊಂಡು ಆ ದಾರಿಯಲ್ಲಿ ನಡೆಯಬೇಕಿದೆ ಎಂದು ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.
ಸರ್ವಜ್ಞನ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಆರೋಗ್ಯಾಧಿಕಾರಿ ಜಿ.ಕೆ.ಕುಲಕರ್ಣಿ, ಸರ್ವಜ್ಞ ಕವಿಯ ಸುಮಾರು 200ಕ್ಕೂ ಹೆಚ್ಚು ಕೃತಿಗಳು ನಮಗೆ ಲಭ್ಯವಿದ್ದು, ಇವುಗಳಲ್ಲಿ ಇಡೀ ಜೀವನದ ಸಾರ ಅಡಗಿದೆ. ಕಲೆ, ಸಂಗೀತ, ಸಾಹಿತ್ಯ, ರಾಜಕೀಯ, ಅರ್ಥಶಾಸ್ತ್ರ ಸೇರಿದಂತೆ ಎಲ್ಲಾ ವಿಚಾರಗಳನ್ನು ತಮ್ಮ ತ್ರಿಪದಿಯ ಮೂಲಕ ಹೇಳಿ ಜನರನ್ನು ಎಚ್ಚರಿಸುವ, ಅವರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ನಿರಂತರ ಹೋರಾಟ ನಡೆಸಿರುವ ಸರ್ವಜ್ಞ ಕವಿಯ ಎಲ್ಲಾ ವಚನಗಳನ್ನು ನಮ್ಮ ಮಕ್ಕಳಿಗೆ ಅರ್ಥದೊಂದಿಗೆ ತಿಳಿಸಿ ಹೇಳುವ ಮೂಲಕ ಅವರನ್ನು ನಮ್ಮೊಳಗೆ ತಂದುಕೊಳ್ಳುವ ಕೆಲಸ ಮಾಡೋಣ ಎಂದರು.

ಜಿಲ್ಲಾ ಶ್ರೀಕುಂಬಾರ ಸಂಘದ ಉಪಾಧ್ಯಕ್ಷ ಗುರುಮೂರ್ತಿ ಮಾತನಾಡಿ, ರಾಜ್ಯದಲ್ಲಿ ಸುಮಾರು 28 ಲಕ್ಷ ಜನಸಂಖ್ಯೆ ಹೊಂದಿರುವ ಕುಂಬಾರ ಸಮಾಜ ಇಂದಿಗೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ಈ ಸಮಾಜದ ಸಮಾಜದ ಮುಖ್ಯವಾಹಿನಿಗೆ ಬರಲು ಕುಂಬಾರ ಅಭಿವೃದ್ಧಿ ನಿಗಮದ ಅವಶ್ಯಕತೆ ಇದೆ. ಇದಕ್ಕಾಗಿ ಕಳೆದ 20 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಧರಣಿ ನಡೆಸುತ್ತಿದ್ದರೂ ಸರಕಾರ ಗಮನಿಸಿಲ್ಲ. ಫೆ.22 ರಿಂದ ಮತ್ತೆ ಅಹೋರಾತ್ರಿ ಧರಣಿ ನಡೆಸಲಿದ್ದೇವೆ. ಅಭಿವೃದ್ಧಿ ನಿಗಮ ರಚಿಸಬೇಕು ಹಾಗೂ ಅದಕ್ಕೆ ನಮ್ಮದೇ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಕುಂಬಾರ್ ಮಾತನಾಡಿ, ಕುಂಬಾರ ಎನ್ನುವುದು ಒಂದು ಚಿಕ್ಕ ಸಮಾಜ. ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ನಮ್ಮ ಮಕ್ಕಳನ್ನು ಆದಷ್ಟು ಮೊಬೈಲ್ನಿಂದ ದೂರವಿಟ್ಟು, ಅವರು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸುವಂತೆ ಮಾಡೋಣ ಎಂದರು.
ತುಮಕೂರು ಜಿಲ್ಲಾ ಶ್ರೀಕುಂಬಾರರ ಸಂಘದ ಅಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ, ಸರಕಾರ ಕವಿ ಸರ್ವಜ್ಞನ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದರ ಹಿಂದಿನ ಉದ್ದೇಶವನ್ನು ಸಮುದಾಯದ ಜನ ಅರ್ಥ ಮಾಡಿಕೊಳ್ಳಬೇಕು. ಸಣ್ಣ, ಸಣ್ಣ ಸಮುದಾಯಗಳು ಇಂತಹ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಸಂಘಟಿತರಾಗಿ, ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬುದಾಗಿದೆ. ಹಾಗಾಗಿ ನಾವೆಲ್ಲರೂ ಒಗ್ಗೂಡಿ ಕಾರ್ಯಕ್ರಮ ಮಾಡುವಂತಾಗ ಬೇಕೆಂದರು.
ವೇದಿಕೆಯಲ್ಲಿ ಕುಂಭಶ್ರೀ ಮಹಿಳಾ ಸಂಘದ ಅಧ್ಯಕ್ಷೆ ರಾಧಮ್ಮ, ಕುಂಬಾರರ ಸಂಘದ ಕಾರ್ಯದರ್ಶಿ ಪುಟ್ಟರಾಜು, ಸಮಾಜ ಸೇವಕರಾದ ಮಂಜುಳ ಶ್ರೀನಿವಾಸ್, ಜಿ.ಪಿ.ಸಂಜೀವರಾಯ, ಪ್ರಕಾಶ್, ಬಿ.ಆರ್.ಶಿವಕುಮಾರ್, ಅನಿತಾ ಈಶ್ವರ್, ಜಯಮ್ಮ ನಾಗರಾಜು, ಅಶ್ವಥ ನಾರಾಯಣರಾಜು, ರಘು, ಗೋವಿಂದರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!