ರೈತರನ್ನು ಬೆದರಿಸುವ ತಂತ್ರಗಾರಿಕೆ ನಿಲ್ಲಿಸಿ: ಗಿರೀಶ್

104

Get real time updates directly on you device, subscribe now.


ತುಮಕೂರು: ಸರಕಾರದ ಯೋಜನೆಯ ಕಾಮಗಾರಿ ನಡೆಸುವ ವೇಳೆ ಜಮೀನಿನ ಮಾಲೀಕರ ಒಪ್ಪಿಗೆ ಪಡೆಯಬೇಕು ಎಂಬ ನಿಯಮವಿದ್ದರೂ ಕೆಪಿಟಿಸಿಎಲ್ ವತಿಯಿಂದ ರೈತರ ಒಪ್ಪಿಗೆ ಪಡೆಯದೆ ಪರಿಹಾರ ನೀಡದೆ ಪೊಲೀಸರ ಸಹಕಾರದೊಂದಿಗೆ ರೈತರನ್ನು ಬೆದರಿಸಿ ವಿದ್ಯುತ್ ಲೈನ್ ಬದಲಾಯಿಸುವ ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ಗಿರೀಶ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ವಿದ್ಯುತ್ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ನೀಡಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ತಡೆಯಲು ಮುಂದಾದ ರೈತರ ಮೇಲೆ ಸುಳ್ಳು ಕೇಸ್ ದಾಖಲಿಸಿ ರೈತರನ್ನು ಬೆದರಿಸುವ ತಂತ್ರಗಾರಿಕೆಯ ಜೊತೆಗೆ ರೈತರ ಒಗ್ಗಟ್ಟು ಒಡೆಯುವ ಕೆಲಸವನ್ನು ಕೆಪಿಟಿಸಿಎಲ್ ಮತ್ತು ಪೊಲೀಸರು ಮಾಡುತ್ತಿದ್ದಾರೆ ಎಂದು ದೂರಿದರು.

ತುಮಕೂರು ಜಿಲ್ಲೆಯ ಹಾರೋನಹಳ್ಳಿ, ಕನೇನಹಳ್ಳಿ, ವಕ್ಕೋಡಿ ಗೊಲ್ಲರಹಟ್ಟಿ, ಕುಪ್ಪೂರು, ಮರಳೇನಹಳ್ಳಿ, ಊರುಕೆರೆ ಗ್ರಾಮದ ಹಲವು ಸರ್ವೆ ನಂಬರ್ ಗಳಲ್ಲಿ ಬೃಹತ್ ವಿದ್ಯುತ್ ಕಾಮಗಾರಿಯನ್ನು ಕೆಪಿಟಿಸಿಎಲ್ ವತಿಯಿಂದ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಲೈನ್ಗಳ ಬದಲಾವಣೆ ಮಾಡಲಾಗುತ್ತಿದೆ. ರೈತರಿಗೆ ಯಾವುದೇ ಭೂ ಪರಿಹಾರ, ಗಿಡ, ಮರಗಳಿಗೆ ಪರಿಹಾರ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ತಮ್ಮ ಜೀವನಕ್ಕಾಗಿ ಸಣ್ಣ, ಪುಟ್ಟ ಭೂಮಿ ನಂಬಿಕೊಂಡಿದ್ದ ದಲಿತರು, ಹಿಂದುಳಿದ ವರ್ಗದವರು, ಬಡವರಿಗೆ ಭೂಮಿ ಇಲ್ಲದಂತಾಗುತ್ತದೆ. ಅಲ್ಲದೆ ಪ್ರಸ್ತುತ ಈ ಭಾಗದಲ್ಲಿ ಪ್ರತಿ ಕುಂಟೆ ಜಮೀನು 10-15 ಲಕ್ಷ ಬೆಲೆ ಬಾಳುತ್ತಿದ್ದು, ಪರಿಹಾರ ನೀಡದೆ ಭೂಮಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಗಿರೀಶ್ ತಿಳಿಸಿದರು.

ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ವಿದ್ಯತ್ ಕಾಮಗಾರಿಗಳಿಗೆ ಜಮೀನು ನೀಡಿರುವ ರೈತರ ಭೂಮಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಜನವರಿ 24, 2023 ರಂದು ಸಲ್ಲಿಸಲಾಗಿದ್ದರೂ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಇದಕ್ಕೂ ಮುನ್ನ ಜನವರಿ 16, 2023 ರಂದು ಸುಮಾರು 40 ಜನ ಸಹಿ ಹಾಕಿದ ಮನವಿ ಪತ್ರವನ್ನು ರೈತರ ನಿಯೋಗದೊಂದಿಗೆ ಖುದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನೀಡಲಾಗಿತ್ತು. ಈ ಬೆಳವಣಿಗೆಯ ನಂತರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಏಕಾಏಕಿ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಭೂ ಪರಿಹಾರ ಪರಿಹಾರ, ಬದಲಿ ಭೂಮಿ ನೀಡದೆ ವಿದ್ಯುತ್ ಲೈನ್ ಎಳೆಯಲು ಮುಂದಾಗಿದ್ದರು. ಈ ವೇಳೆ ರೈತರು ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೈತರ ವಿರುದ್ಧವಾಗಿ ಸುಳ್ಳು ಪೊಲೀಸ್ ದೂರು ನೀಡಿ ಬೆದರಿಕೆ ಹಾಕಿರುವುದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೆ ಕೆಪಿಟಿಸಿಎಲ್ ವತಿಯಿಂದ ರೈತರಿಗೆ ಖಾಲಿ ಇರುವ ನೊಟೀಸ್ ನೀಡಿ ನೀವೇ ಭರ್ತಿ ಮಾಡಿ 100 ಛಾಪಾ ಕಾಗದದಲ್ಲಿ ಸಹಿ ಮಾಡಿ ನೀಡುವಂತೆ ಬೆದರಿಕೆ ಹಾಕುತ್ತಿರುವುದು ಹಲವು ಅನುಮಾನ ಹುಟ್ಟು ಹಾಕಿದೆ ಎಂದರು.

ಜಿಲ್ಲಾಡಳಿತ, ರಾಜ್ಯ ಬಿಜೆಪಿ ಸರಕಾರ ಕಾನೂನು ಬದ್ಧವಾಗಿ ಜಮೀನಿನ ಮಾಲೀಕತ್ವ ಹೊಂದಿರುವ ರೈತರಿಗೆ ಯಾವುದೇ ಪರಿಹಾರ ನೀಡದೆ ವಿದ್ಯುತ್ ಲೈನ್ ಎಳೆಯಲು ಸಂವಿಧಾನ ಬಾಹಿರವಾಗಿ ಪೊಲೀಸ್ ಬಲ ಬಳಸುತ್ತಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಭಾಗದಲ್ಲಿ ನಡೆದಿರುವ ಎತ್ತಿನಹೊಳೆ, ಹೇಮಾವತಿ ನಾಲಾ ಕಾಮಗಾರಿ, ಪವರ್ ಗ್ರಿಡ್, ರಸ್ತೆ, ಕೈಗಾರಿಕಾ ಕಾಮಗಾರಿಗಳಿಗೆ ಪರಿಹಾರ ನೀಡಲಾಗುತ್ತಿದೆ. ಆದರೆ ವಿದ್ಯುತ್ ಕಾಮಗಾರಿಗಳಿಗೆ ಪರಿಹಾರ ನೀಡದೆ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಸೂಕ್ತ ಪರಿಹಾರ ನೀಡಿ ಕಾಮಗಾರಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಮತ್ತು ಕೆಪಿಟಿಸಿಎಲ್ ಗೆ ಸೂಕ್ತ ಆದೇಶ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಗಿರೀಶ್ ತಿಳಿಸಿದರು.

ಅಧಿಕಾರಿಗಳು ಇದು ಹಳೆಯ ಕಾಮಗಾರಿ ಎಂದು ಹಾರಿಕೆಯ ಉತ್ತರ ನೀಡಿ ರೈತರನ್ನು ಸಾಗ ಹಾಕುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ರೈತರ ಕಾನೂನುಬದ್ಧ ಭೂಮಿಗೆ ಭೂ ಪರಿಹಾರ ಮತ್ತು ಬದಲಿ ಭೂಮಿಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಗಿರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಐಕೆಎಸ್ ನ ಅಶ್ವಥನಾರಾಯಣ, ಗಂಗರಾಜು, ಗಂಗಣ್ಣ, ವೆಂಕಟೇಶ್, ಓಂಕಾರಕೃಷ್ಣ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!