ಕ್ರೈಸ್ತರ ಅಭಿವೃದ್ಧಿಗೆ ಹಲವು ಯೋಜನೆ ಜಾರಿ: ಕೆನಡಿ

135

Get real time updates directly on you device, subscribe now.


ತುಮಕೂರು: ಕ್ರೈಸ್ತ ಸಮುದಾಯದ ದುರ್ಬಲ ವರ್ಗದವರು ಮದುವೆ, ಮತ್ತಿತರ ಶುಭ ಸಮಾರಂಭ ಆಯೋಜಿಸಲು ಅನುವಾಗುವಂತೆ ರಾಜ್ಯದಲ್ಲಿ 2011 ರಿಂದ ಈವರೆಗೂ ಸುಮಾರು 150 ಹೊಸ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ದಿ ಸಮಿತಿ ಅಧ್ಯಕ್ಷ ಜೆ.ಕೆನಡಿ ಶಾಂತಕುಮಾರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈದ್ರಾಬಾದ್- ಕರ್ನಾಟಕ ಪ್ರದೇಶದಲ್ಲೇ ಸುಮಾರು 85 ಸಮುದಾಯ ಭವನ ಸೇರಿದಂತೆ ರಾಜ್ಯದಲ್ಲಿ 150 ಭವನ ನಿರ್ಮಾಣ ಮಾಡಲಾಗಿದೆ. ಕ್ರೈಸ್ತ ಸಮುದಾಯದ ಬಡ ವರ್ಗದವರಿಗೆ ಕಡಿಮೆ ಬಾಡಿಗೆ ದರ ನಿಗದಿಪಡಿಸಿ ಸಮುದಾಯ ಭವನ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಮುದಾಯ ಭವನ ನಿರ್ಮಾಣಕ್ಕಾಗಿ ನಗರ ಪ್ರದೇಶದಲ್ಲಿ 1 ಕೋಟಿ ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 50 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಕ್ರೈಸ್ತ ಅಭಿವೃದ್ಧಿ ಸಮಿತಿಯು 2011ರಲ್ಲಿ ರಚನೆಯಾಗಿದ್ದು, ಸಮಿತಿ ರಚನೆಯಾದ ಪ್ರಾರಂಭದಲ್ಲಿ 50 ಕೋಟಿ ರೂ. ಅನುದಾನ ಲಭ್ಯವಿತ್ತು, ಪ್ರಸ್ತುತ 200 ಕೋಟಿ ರೂ. ಅನುದಾನ ಲಭ್ಯವಿದೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಈ ಅನುದಾನ ವಿನಿಯೋಗಿಸಲಾಗುತ್ತಿದೆ. ಇದರಿಂದ ಪರಿಣಾಮಕಾರಿಯಾಗಿ ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.

ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ 25 ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಫಲಾನುಭವಿಗಳ ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದ್ದೇನೆ. ಮಾಹಿತಿ ಕೊರತೆಯಿಂದ ಕೆಲ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ದೊರೆತಿರುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಶಿಬಿರಗಳನ್ನು ಸಮಿತಿಯಿಂದ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಅಲೀಮುಲ್ಲಾ ಇದ್ದರು.

Get real time updates directly on you device, subscribe now.

Comments are closed.

error: Content is protected !!