ಮಾ.5ಕ್ಕೆ ಎಂ.ಜಿ.ಸ್ಟೇಡಿಯಂ ಲೋಕಾರ್ಪಣೆ

ಸಿಎಂ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡ್ತಾರೆ: ಶಾಸಕ

230

Get real time updates directly on you device, subscribe now.


ತುಮಕೂರು: ಸ್ಮಾರ್ಟ್ಸಿಟಿ ಹಾಗೂ ವಿವಿಧ ಅನುದಾನದ ಅಡಿಯಲ್ಲಿ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧಿ ಕ್ರೀಡಾಂಗಣ, ಕೇಂದ್ರ ಗ್ರಂಥಾಲಯ ಆವರಣದ ಇನ್ ಕ್ಯೂಬೇಷನ್ ಸೆಂಟರ್ ಸೇರಿದಂತೆ ಸುಮಾರು 300 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ 05 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆಯ ಮಹಾತ್ಮಗಾಂಧಿ ಕ್ರೀಡಾಂಗಣ ನೆಲ ಸಮಗೊಳಿಸಿ ಅದೇ ಜಾಗದಲ್ಲಿ 54 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗಿದೆ. ಇಲ್ಲಿ ಪ್ರಮುಖವಾಗಿ ಅಥ್ಲೆಟಿಕ್, ಫುಟ್ಬಾಲ್, ಹಾಕಿಗೆ ಅವಕಾಶವಿದೆ. ಇದರ ಜೊತೆಗೆ ಇತರೆ ಎಲ್ಲಾ ಕ್ರೀಡೆಗಳಿಗೂ ಅಗತ್ಯಾನುಸಾರ ಅವಕಾಶ ಕಲ್ಪಿಸಲು ಇಲಾಖೆ ಮುಂದಾಗಿದೆ ಎಂದರು.

ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾ ಸಂಕೀರ್ಣವನ್ನು ಖಾಸಗಿಯವರಿಗೆ ವಹಿಸಲಿದೆ ಎಂಬ ಬಗ್ಗೆ ನನ್ನ ಹೆಸರನ್ನು ಪ್ರಸ್ತಾಪಿಸಿ ಹಲವರು ಆರೋಪ ಮಾಡಿದ್ದಾರೆ. ಆದರೆ ಅದಕ್ಕೂ ನನಗೂ ಸಂಬಂಧವಿಲ್ಲ. ಕ್ರೀಡಾಂಗಣದ ನಿರ್ವಹಣೆಗೆ ಮಾಸಿಕ ಕನಿಷ್ಠ 7- 8 ಲಕ್ಷ ರೂ. ಖರ್ಚು ಬೇಕಾಗುತ್ತದೆ. ಹಾಗಾಗಿ ಸಂಪನ್ಮೂಲ ಕ್ರೂಢೀಕರಣಕ್ಕೆ ಇಲಾಖೆಯಿಂದಲೇ ಮಳಿಗೆ ಹಂಚಿಕೆ ಮುಂದಾಗಿದ್ದಾರೆ. ನಾವು ಕೂಡ ಎಲ್ಲಾ ಕ್ರೀಡಾ ಕ್ಲಬ್ಗಳಿಗೆ ಮಳಿಗೆ ನೀಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸಮರ್ಪಕ ನಿರ್ವಹಣೆ ಇಲ್ಲದೆ ಹೋದರೆ ಹತ್ತಾರು ಕೋಟಿ ಖರ್ಚು ಮಾಡಿಯೂ ಏನು ಪ್ರಯೋಜನ ಇರುವುದಿಲ್ಲ. ಹಾಗಾಗಿ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಬೇಕಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆಗೆ ನನ್ನ ಅವಧಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿರುವುದಲ್ಲದೆ ಟ್ರಾಮಾ ಕೇಸ್ ಸೆಂಟರ್, ಕ್ರಿಟಿಕಲ್ ಕೇರ್ ಯೂನಿಟ್, ತಾಯಿ ಮತ್ತು ಮಗುವಿನ ಆಸ್ಪತ್ರೆ ಹೀಗೆ ಹಲವಾರು ಯೋಜನೆಗಳನ್ನು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೈಗೊಳ್ಳಲಾಗಿದೆ. ಇದರ ಜೊತೆಗೆ ಈ ಸಾಲಿನ ಬಜೆಟ್ ನಲ್ಲಿ ಒಂದು ನರ್ಸಿಂಗ್ ಕಾಲೇಜನ್ನು ಸ್ಥಾಪಿಸಲು ಮುಂದಾಗಿದೆ. ಇದರ ಜೊತೆಗೆ ಹಾಲಿ ಇರುವ ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಹೊಸದಾಗಿ 7 ನಮ್ಮ ಕ್ಲಿನಿಕ್ ಗಳನ್ನು ಸಹ ಮಂಜೂರು ಮಾಡಿದ್ದು, ಈಗಾಗಲೇ ಎರಡು ಕಾರ್ಯಾರಂಭ ಮಾಡಿದ್ದು, ಉಳಿದವುಗಳನ್ನು ಹಂತ ಹಂತವಾಗಿ ಉದ್ಘಾಟಿಸಲಾಗುವುದು ಎಂದರು.

ಕಳೆದ ಐದು ವರ್ಷಗಳ ಹಿಂದಿಗೆ ಹೋಲಿಕೆ ಮಾಡಿದರೆ ತುಮಕೂರು ನಗರದಲ್ಲಿ ಸ್ಮಾರ್ಟ್ಸಿಟಿ, ಸರಕಾರದ ವಿಶೇಷ ಅನುದಾನದಲ್ಲಿ ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾಮಗಾರಿಗಳಿಂದ ಗುರುತರವಾದ ಬದಲಾವಣೆ ಕಾಣುತ್ತಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!