ತುಮಕೂರು: ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ಸಮಾನತೆಯ ಪಾಠ ಕಲಿಸುವಲ್ಲಿ ಸ್ಕೌಟ್ ಮತ್ತು ಗೈಡ್ಸ್ನ ಪಾತ್ರ ಮಹತ್ವದ್ದು ಎಂದು ಹಿರಿಯ ಸಾಹಿತಿ ಡಾ.ಕವಿತಾಕೃಷ್ಣ ತಿಳಿಸಿದರು.
ನಗರದ ಆರ್ಯನ್ ಹೈಸ್ಕೂಲ್ ನ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಉಪ್ಪಾರಹಳ್ಳಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸಂಪಿಗೆಯಲ್ಲಿ ಅರಳಿದ ಚಂದ್ರಬಿಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊದಲು ಗಂಡು ಮಕ್ಕಳಿಗೆ ಆರಂಭವಾದ ಸ್ಕೌಟ್ಸ್ ಮತ್ತು ಗೈಡ್ಸ್ ತದನಂತರದಲ್ಲಿ ಹೆಣ್ಣು ಮಕ್ಕಳಿಗೂ ಆರಂಭಿಸಿ ಗಂಡು, ಹೆಣ್ಣು ಎಂಬ ಲಿಂಗಭೇದ ವಿಲ್ಲದಂತೆ ಮಕ್ಕಳನ್ನು ಕಾಣುವುದು ಇದರ ಉದ್ದೇಶವಾಗಿದೆ ಎಂದರು.
ಸೇನೆಯಲ್ಲಿ ದಂಡನಾಯಕನಾಗಿದ್ದ ಬೆಡೇನ್ ಪೋವೆಲ್ ಮತ್ತು ಅವರ ಪತ್ನಿ ಒಲೇನ್ ಅವರು ಸೇರಿ 1907ರಲ್ಲಿ ಸ್ಥಾಪಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ, ನಾಡು, ನುಡಿಯ ಬಗ್ಗೆ ಗೌರವ ಬೆಳೆಸುವುದಲ್ಲದೆ ತನ್ನಂತೆಯೇ ಇತರರನ್ನು ಪ್ರೀತಿಸುವ ಗುಣ ಕಲಿಸುತ್ತದೆ, ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಮೊದಲ ಘಟಕ ಆರಂಭವಾಗಿದ್ದು, ತದನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹಕಾರದಿಂದ ಇಡೀ ನಾಡಿಗೆ ವಿಸ್ತಾರಗೊಂಡಿತ್ತು. ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವುದು ಇದರ ಗುರಿಯಾಗಿದೆ. ಮಕ್ಕಳಲ್ಲಿ ವಿಶ್ವಮಾನವ ತತ್ವ ಬಿತ್ತುವುದರ ಜೊತೆಗೆ ಅವರಲ್ಲಿ ದೇಶದ ಐಕ್ಯತೆ, ಸಮಗ್ರತೆಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಸ್ಕೌಟ್ ಮತ್ತು ಗೈಡ್ಸ್ ಮಾಡುತ್ತಿದೆ. ಇವರ ಕಾರ್ಯ ಮತ್ತಷ್ಟು ಯುವ ಪೀಳಿಗೆಯನ್ನು ತಲುಪುವಂತಾಗಲಿ ಎಂದು ಡಾ.ಕವಿತಾಕೃಷ್ಣ ನುಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೆಳ್ಳಾವೆಯ ಕಾರದ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಮನುಷ್ಯ ಎಲ್ಲಾ ಹಂತದಲ್ಲಿಯೂ ಕಲಿಯುವಂತದ್ದು ಇದ್ದೇ ಇರುತ್ತದೆ. ಕುಡಿತಕ್ಕೆ ದಾಸನಾಗಿ, ಜೀವನವನ್ನೇ ಬಲಿಕೊಟ್ಟಿದ್ದ ವ್ಯಕ್ತಿಯೊಬ್ಬ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ನಡೆಸುವ ಮದ್ಯಪಾನ ಮುಕ್ತ ಶಿಬಿರದಲ್ಲಿ ಪಾಲ್ಗೊಂಡು ಅಲ್ಲಿ ಸಿಕ್ಕ ಮಾರ್ಗದರ್ಶನದ ಮೂಲಕ ತಾನು ಕಲಿತ ವಿದ್ಯೆಯನ್ನು ವೃತ್ತಿಯಾಗಿಸಿಕೊಂಡು ಇಂದು ಹತ್ತಾರು ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಸಮಾಜದ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಡಾ.ಎಂ.ಪಿ.ಚಂದ್ರಶೇಖರ್ ಕುರಿತು ಹೊರ ತಂದಿರುವ ಸಂಪಿಗೆಯಲ್ಲಿ ಅರಳಿದ ಚಂದ್ರಬಿಂಬ ಪುಸ್ತಕ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲವುಳ್ಳ ವ್ಯಕ್ತಿಗಳಿಗೆ ಸ್ಪೂರ್ತಿಯಾಗಲಿದೆ. ಮಕ್ಕಳು ಇನ್ನೊಬ್ಬರ ಬಾಳು ಹಾಳು ಮಾಡುವ ಬೆಂಕಿಯಾಗದೆ ಇನ್ನೊಬ್ಬರ ಬದುಕು ಬೆಳೆಗಿಸುವ ದೀಪವಾಗಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಸ್ಥಳೀಯ ಸಂಸ್ಥೆ ತುಮಕೂರಿನ ಅಧ್ಯಕ್ಷ ಉಪ್ಪಾರಹಳ್ಳಿ ಕುಮಾರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಕಲಿಕೆಯ ಜೊತೆಗೆ ಶಿಸ್ತು ಮತ್ತು ಸಂಯಮ ರೂಢಿಸಿಕೊಳ್ಳಲು ಕಾರಣವಾಗಿದೆ. ಮಕ್ಕಳನ್ನು ಕೇವಲ ಭತ್ತ ತುಂಬುವ ಚೀಲವಾಗಿಸದೆ ಅವರನ್ನು ಭತ್ತ ಬೆಳೆಯುವ ಗದ್ದೆಯಾಗಿಸಿ ಎಲ್ಲರಿಗೂ ಉಪಯೋಗವಾಗುವಂತಹ ವ್ಯಕ್ತಿತ್ವವನ್ನು ಮಕ್ಕಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ರೂಪಿಸುತ್ತದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಾನಿಕ ಆಯುಕ್ತ ಈಶ್ವರಯ್ಯ, ಉದ್ಯಮಿ ಡಾ.ಎಂ.ಪಿ.ಚಂದ್ರಶೇಖರ್, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಗಣೇಶ್ ಆಚಾರ್ಯ, ತಾಲೂಕು ಯೋಜನಾಧಿಕಾರಿ ಸುನೀತ ಪ್ರಭು, ಜನನಿ ಸೇವಾ ಟ್ರಸ್ಟ್ನ ಜಯಶ್ರೀ, ಆರ್ಯನ್ ಹೈಸ್ಕೂಲ್ನ ಪ್ರಾಂಶುಪಾಲ ಗೋಪಾಲ್ ಟಿ.ಅರ್, ಉಪ ಪ್ರಾಂಶುಪಾಲ ಪಿ.ಮಂಜುನಾಥ್, ಸಾಯಿ ಅಚ್ಯುತ್ ಹೌಸಿಂಗ್ನ ಡಿ.ಎಸ್.ಮಂಜುಳ, ಆಡಳಿತಾಧಿಕಾರಿ ಹೆಚ್.ಎಸ್.ಸಿದ್ದರಾಜು, ಗೈಡ್ಸ್ ತರಬೇತುದಾರ ಗುರುನಾಥ್ ಪಿ.ನಾಯ್ಕ್, ರೂಪಾ ಇತತರು ಇದ್ದರು.
Comments are closed.