ತುರುವೇಕೆರೆ: ತಾಲೂಕಿನ ಲೋಕಮ್ಮನಹಳ್ಳಿ ಪೀಡರ್ ವ್ಯಾಪ್ತಿಗೆ ಒಳಪಡುವ ರೈತರು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜ್ ನೇತೃತ್ವದಲ್ಲಿ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜ್ ಮಾತನಾಡಿ ಲೋಕಮ್ಮನಹಳ್ಳಿ ಪೀಡರ್ ವ್ಯಾಪ್ತಿಯ ಸುಮಾರು 15 ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯ ರೈತರು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪೂರೈಕೆ ಇಲ್ಲದೆ ಪರಿತಪಿಸುವಂತಾಗಿದೆ. ಹಗಲು 3 ಗಂಟೆ ಹಾಗೂ ರಾತ್ರಿ ವೇಳೆ 4 ಗಂಟೆ ಮೂರು ಪೇಸ್ ವಿದ್ಯುತ್ ನೀಡಬೇಕೆಂದು ಸರಕಾರದ ಆದೇಶವಿದೆ. ಕರ್ನಾಟಕ ವಿದ್ಯುಚ್ಚಕ್ತಿ ಆಕ್ಟ್ ಉಲ್ಲಂಘಿಸುವ ಮೂಲಕ ಬೆಸ್ಕಾಂ ಅಧಿಕಾರಿಗಳು ರೈತರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.
ವಿದ್ಯುತ್ ಸಮಸ್ಯೆ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುವ ಮೂಲಕ ರೈತರನ್ನು ಅಸಡ್ಡೆಯಿಂದ ಕಾಣುತ್ತಾರೆ. ಒಟ್ಟಾರೆ ಬೆಸ್ಕಾಂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಬೆಸ್ಕಾಂ ಕಚೇರಿ ಮುಂದೆ ಕೆಲವೇ ರೈತರು ಸಾಂಕೇತಿಕ ಧರಣಿ ನಡೆಸಿ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಇದಾಗಿದ್ದು, ಅಧಿಕಾರಿಗಳು ತಕ್ಷಣ ಮೂರು ಪೇಸ್ ವಿದ್ಯುತ್ ನೀಡಲು ಮುಂದಾಗಲಿ. ಇಲ್ಲವಾದಲ್ಲಿ ಶೀಘ್ರ ತಾಲೂಕಿನ ಎಲ್ಲಾ ರೈತರು ಒಟ್ಟಾಗಿ ಸೇರಿಸಿ ಬೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಚೇರಿ ಬಳಿ ಆಗಮಿಸಿದ ರೈತರು ಬೆಸ್ಕಾಂ ರೈತ ವಿರೋಧಿ ನೀತಿ ಖಂಡಿಸಿ ಧಿಕ್ಕಾರ ಕೂಗಿದರು. ಸಮರ್ಪಕ ವಿದ್ಯುತ್ ಪೂರೈಕೆ ಕುರಿತಾಗಿ ಕಚೇರಿಯಲ್ಲಿದ್ದ ಬೆಸ್ಕಾಂ ಅಧಿಕಾರಿಗಳನ್ನು ರೈತರು ತರಾಟೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಗಂಗಾಧರ ಸ್ವಾಮಿ, ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಗುರುರಾಜ್, ರೈತ ಮುಖಂಡರಾದ ದಯಾನಂದ, ಚಂದ್ರಯ್ಯ, ಸಂತೋಷ್, ಚನ್ನಬಸವಯ್ಯ ಇತರರು ಇದ್ದರು.
Comments are closed.