ದುಸ್ಥಿತಿ ತಲುಪಿದ ಹವಮಾನ ಮಾಪನ ಕೇಂದ್ರ

ಸಮರ್ಪಕ ನಿರ್ವಹಣೆ ಇಲ್ಲದೆ ಅಧ್ವಾನ- ಸುಸ್ಥಿತಿಗೊಳಿಸಲು ನಾಗರಿಕರ ಒತ್ತಾಯ

160

Get real time updates directly on you device, subscribe now.


ಕುಣಿಗಲ್: ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಕೇಂದ್ರ ಭೂ ವಿಜ್ಞಾನ ಇಲಾಖೆ, ಭಾರತೀಯ ಹವಮಾನ ಇಲಾಖೆಯಡಿಯಲ್ಲಿ ಸ್ಥಾಪಿಸಿರುವ ಸ್ವಯಂ ಚಾಲಿತ ಹವಮಾನ ಮಾಪನ ಕೇಂದ್ರ ದುಸ್ಥಿತಿಗೆ ತಲುಪಿದ್ದು ಸದರಿ ಕೇಂದ್ರ ಸುಸ್ಥಿತಿಗೊಳಿಸಲು ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಎಇಇ ಕಛೇರಿಯ ಅವರಣದ ಒಂದು ಭಾಗದಲ್ಲಿ ರಾಜ್ಯಸರ್ಕಾರವೂ ಮಳೆಮಾಪನ ಕೇಂದ್ರ ಸ್ಥಾಪಿಸಿದ್ದು ಸುಸ್ಥಿತಿಯಲ್ಲಿದೆ. ಅದರೆ, ಕೇಂದ್ರ ಭೂವಿಜ್ಞಾನ ಇಲಾಖೆಯ ಅಡಿಯಲ್ಲಿ ಭಾರತೀಯ ಹವಮಾನ ಇಲಾಖೆಯು ಸ್ವಯಂ ಚಾಲಿತ ಮಳೆಮಾಪನ ಸೇರಿದಂತೆ ಇತರೆ ಹವಮಾನ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಿದೆ. ಸದರಿ ಕೇಂದ್ರಕ್ಕೆ ಬೇಲಿ ಹಾಕಿ ಯಾರೂ ಹೋಗದಂತೆ ಗೇಟ್ ಅಳವಡಿಸಿ ಬೀಗ ಹಾಕಿದ್ದಾರೆ.

ಕೇಂದ್ರ, ರಾಜ್ಯಸರ್ಕಾರದ ಯಾವುದೇ ಯೋಜನೆ ಜಾರಿಗೊಳ್ಳುವ ಮುನ್ನ ಮಳೆ ಪ್ರಮಾಣ ಸೇರಿದಂತೆ ಇತರೆ ಅಂಕಿ, ಅಂಶಗಳು ಪ್ರಮುಖ ಆಧಾರವಾಗುತ್ತದೆ. ಆದರೆ ಸಾರ್ವಜನಿಕರ ತೆರಿಗೆ ಹಣದಿಂದ ಕೇಂದ್ರ ಸರ್ಕಾರದ ಹವಮಾನ ಇಲಾಖೆಯವರು ಲಕ್ಷಾಂತರ ರೂ. ವೆಚ್ಚ ಮಾಡಿ ಸೂಕ್ತ ನಿರ್ವಹಣೆ ಮಾಡದ ಕಾರಣ ಮಾಪನ ಕೇಂದ್ರದ ಒಳಗೆಲ್ಲ ಗಿಡಗೆಂಟೆ, ಮರಗಳು ಬೆಳೆದು ಹವಮಾನ ಮಾಪನ ಯಂತ್ರಗಳು ತುಕ್ಕು ಹಿಡಿಯುವಂತಾಗಿದೆ. ಆನ್ಲೈನ್ ವ್ಯವಸ್ಥೆ ಮೂಲಕ ಮಾಪನ ವ್ಯವಸ್ಥೆ ನಿರ್ವಹಿಸಲು ಸೋಲಾರ್ ಪ್ಯಾನಲ್ ಬ್ಯಾಟರಿ ಅಳವಡಿಸಿದ್ದು ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿದೆ. ಸದರಿ ಕೇಂದ್ರವನ್ನು ಎರಡು ವರ್ಷದ ಹಿಂದೆ ಹೊಸದಾಗಿ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದ್ದು ಎರಡು ವರ್ಷದಿಂದ ಕೇಂದ್ರ ಸರ್ಕಾರದ ಹವಮಾನ ಇಲಾಖೆಯ ಯಾವುದೇ ಸಿಬ್ಬಂದಿ ಇತ್ತ ತಲೆ ಹಾಕದ ಕಾರಣ ಹಾಗೂ ಇದರ ನಿರ್ವಹಣೆ ಸ್ಥಳೀಯವಾಗಿ ಯಾವುದೇ ಸಿಬ್ಬಂದಿಗೂ ವಹಿಸಿ ಕೊಡದ ಕಾರಣ ಇಡೀ ಕೇಂದ್ರ ಸಂಪೂರ್ಣ ಗಿಡ ಗೆಂಟೆಗಳಿಂದ ಆವೃತವಾಗಿ ಮಾಪನ ಯಂತ್ರಗಳು ಇದರಲ್ಲಿ ಇದೆಯೆ ಎಂಬ ಅನುಮಾನ ಮೂಡುತ್ತಿದೆ.

ಸದರಿ ಕೇಂದ್ರವನ್ನು ತಮಿಳುನಾಡಿನ ಚೆನ್ನೈನ ಏಜೆನ್ಸಿಯವರು ಅಳವಡಿಸಿ ಹೋಗಿದ್ದಾರೆ. ಅವರ ಯಾವುದೇ ಸಂಪರ್ಕ ಸಂಖ್ಯೆ ನೀಡಿಲ್ಲ. ಅವರು ಯಾವಾಗ ಬರುತ್ತಾರೆ ಎಂಬ ಮಾಹಿತಿಯೂ ನಮಗೆ ಗೊತ್ತಿಲ್ಲ. ಎರಡು ವರ್ಷದ ಕೆಳಗೆ ಅಳವಡಿಸಿದ್ದು ಆಗ ಸ್ವಚ್ಛಗೊಳಿಸಲಾಗಿತ್ತು. ಪುನಃ ಯಾರು ಬಂದಿಲ್ಲ ಎಂದು ಸ್ಥಳೀಯ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಯೋಜನೆಗಳು ಅದರಲ್ಲೂ ವಿಶೇಷವಾಗಿ ಕೃಷಿಗೆ ಸಂಬಂಧಿಸಿದಂತೆ ರೂಪಿಸುವಾಗ ಹವಮಾನ ಮಾಪನ ಕೇಂದ್ರಗಳ ಮಾಹಿತಿ ಅತ್ಯಗತ್ಯವಾಗುತ್ತದೆ. ಕೆಲ ಕಾರಣಗಳಿಂದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಅಂಕಿ ಅಂಶದ ಮಾಹಿತಿ ಒಪ್ಪದ ಕೇಂದ್ರ ಸರ್ಕಾರ ಹವಮಾನ ಮಾಪಕ ಕೇಂದ್ರ ಸ್ಥಾಪಿಸುತ್ತದೆ. ಆದರೆ ಸಮರ್ಪಕ ನಿರ್ವಹಣೆ ಮಾಡುವುದರಲ್ಲಿ ನಿರ್ಲಕ್ಷ್ಯ ತೋರಿರುವುದು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವಂತಾಗಿದೆ. ಇನ್ನಾದರೂ ಎಚ್ಚೆತ್ತು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!