ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾರ್ಚ್ 5 ರಂದು ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಪೂರ್ವಭಾವಿಸಭೆ ನಡೆಸಿ ಮಾತನಾಡಿದ ಅವರು ಸಮಾವೇಶದಲ್ಲಿ ವಿವಿಧ ಇಲಾಖೆಯ ಯೋಜನೆಗಳಡಿ ಆಯ್ಕೆಯಾಗಿರುವ ಸುಮಾರು 25000 ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯ ನೀಡಲಾಗುವುದು ಎಂದರು.
ಸಮಾವೇಶದಲ್ಲಿ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ರೇಷ್ಮೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ಕಾರ್ಮಿಕ ಇಲಾಖೆಗಳು ಸೇರಿದಂತೆ ವಿವಿಧ ನಿಗಮಗಳು ನೀಡುವ ಸಾಲ, ಸಹಾಯಧನ, ರೈತ ವಿದ್ಯಾನಿಧಿ, ವಿದ್ಯಾಸಿರಿ, ಗಂಗಾ ಕಲ್ಯಾಣ, ವಿದ್ಯಾರ್ಥಿ ವೇತನ, ಪಿಎಂ ಕಿಸಾನ್, ಪ್ರೋತ್ಸಾಹ ಧನ, ಕಾನೂನು ತರಬೇತಿ ಹಾಗೂ ಮತ್ತಿತರ ಸೌಲಭ್ಯಗಳನ್ನು ಮುಖ್ಯಮಂತ್ರಿಗಳು ಜಿಲ್ಲೆಯ ಫಲಾನುಭವಿಗಳಿಗೆ ವಿತರಿಸಲಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಫಲಾನುಭವಿಗಳನ್ನು ಕರೆ ತರುವ ಜವಾಬ್ದಾರಿಯನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ವಹಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ನಗರದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಎಸ್ಪಿ ಕಚೇರಿಯ ಐಸಿಎಂಸಿಸಿ ಕಟ್ಟಡ, ಮಹಾತ್ಮ ಗಾಂಧಿ ಕ್ರೀಡಾಂಗಣ, ಜಿಲ್ಲಾ ಆಸ್ಪತ್ರೆಯ ಟ್ರಾಮಾ ಸೆಂಟರ್, ನಗರದ ರಿಂಗ್ ರಸ್ತೆ, ಸ್ಮಾರ್ಟ್ ರಸ್ತೆ, ಲಿಂಕ್ ರಸ್ತೆ, ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿ, ಸಾರ್ವಜನಿಕ ಗ್ರಂಥಾಲಯ, ನಗರದ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಪಡಿಸಿರುವ ಉದ್ಯಾನವನ, ಅಮಾನಿಕೆರೆಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿ ಸೇರಿದಂತೆ ವಿವಿಧ ಕಟ್ಟಡ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೇಳಿದರು.
ಸಮಾವೇಶದ ಅಂಗವಾಗಿ ಮಾರ್ಚ್ 5 ರಿಂದ 8ರ ವರೆಗೆ ತೋಟಗಾರಿಕಾ ಇಲಾಖೆಯಿಂದ ಫಲಪುಷ್ಟ ಪ್ರದರ್ಶನ ಏರ್ಪಡಿಸಲು ತೋಟಗಾರಿಕೆ ಉಪ ನಿರ್ದೇಶಕ ರಘು ಅವರಿಗೆ ಸೂಚನೆ ನೀಡಿದರು. ಅಲ್ಲದೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 5 ರಿಂದ 8ರ ವರೆಗೆ ವಿಶೇಷ ವಸ್ತುಪ್ರದರ್ಶ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಫಲಾನುಭವಿಗಳನ್ನು ಸಮಾವೇಶಕ್ಕೆ ಎಲ್ಲಾ ತಾಲೂಕುಗಳಿಂದ ಕರೆತರಲು 600 ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಾಪೂರವಾಡ್ ಮಾತನಾಡಿ, ಕಾರ್ಯಕ್ರಮಕ್ಕೆ ಬರುವ ವಾಹನಗಳಿಗಾಗಿ ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ನಗರ ಶಾಸಕ ಜ್ಯೋತಿ ಗಣೇಶ್ ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿ ಹೆಚ್.ಶಿವಪ್ಪ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ವಿಕಲಚೇತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶು ಸಂಗೋಪನಾ, ಕಾರ್ಮಿಕ ಇಲಾಖೆ, ವಿವಿಧ ನಿಗಮಗಳು, ಜಿಲ್ಲಾ ಪಂಚಾಯತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.