ಗುಬ್ಬಿ: ನಾನು ಕಾಂಗ್ರೆಸ್ ಸೇರುವುದು ಖಚಿತ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಬರುವುದು ನಿಶ್ಚಿತ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಗುಬ್ಬಿ ತಾಲ್ಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಬಜೆಟ್ ಅದೇಶನ ಮುಕ್ತಾಯಗೊಂಡಿದ್ದು, ಮುಂದಿನ ವಾರದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತೇನೆ. ನನ್ನ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಯಾವುದೇ ಒಂದು ಸಮುದಾಯ ಇಟ್ಟುಕೊಂಡು ರಾಜಕೀಯ ಅಥವಾ ಚುನಾವಣೆ ಮಾಡಲು ಸಾಧ್ಯವಿಲ್ಲ. ಚಿಕ್ಕ ಪುಟ್ಟ ಸಮುದಾಯಗಳು ಕೂಡ ಬಹಳ ಮುಖ್ಯವಾಗಿದ್ದು ಅವರೆಲ್ಲರ ಆಶೀರ್ವಾದದಿಂದಲೇ ನಾನು 20 ವರ್ಷಗಳ ಕಾಲ ಮುಂದುವರೆದಿದ್ದೇನೆ. ಮುಂದಿನ ಬಾರಿಯೂ ನನ್ನ ಎಲ್ಲಾ ಕಾರ್ಯಕರ್ತರು ನನ್ನ ಜೊತೆಯಲ್ಲಿ ಸಾಗುತ್ತಾರೆ ಎಂದರು.
ಬಿಜೆಪಿ ಪಕ್ಷ ನನಗೆ ಹೊಂದಾಣಿಕೆ ಆಗುತ್ತಿಲ್ಲ. ನನ್ನ ಮನಸ್ಸಿಗೆ ಇಷ್ಟವಾಗದ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ನನ್ನ ಮನಸಾಕ್ಷಿಗೆ ಮೋಸ ಮಾಡಿದ್ದರೆ ಇಂದು ಸಚಿವನಾಗಿರುತ್ತಿದ್ದೆ. ಎಲ್ಲಾ ರೀತಿಯ ಅನುಕೂಲ ಆಗುತ್ತಿತ್ತು. ಆದರೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡುವುದಿಲ್ಲ ಎಂದು ತಿಳಿಸಿದರು.
ನನಗೆ ಬಿಜೆಪಿ ಎದುರಾಳಿಮೇ ಹೊರತು ಜೆಡಿಎಸ್ ಅಲ್ಲವೇ ಅಲ್ಲ. ಪ್ರತಿ ಬಾರಿಯೂ ಬಿಜೆಪಿಯ ಅಭ್ಯರ್ಥಿಗಳೇ ಎದುರಾಳಿಯಾಗಿರುತ್ತಾರೆ. ಈ ಬಾರಿಯೂ ಆಗುವುದು ಸಹಜ, ಅದನ್ನು ಧೈರ್ಯವಾಗಿ ಎದುರಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ್, ದಯಾನಂದ, ಚನ್ನಿಗರಾಮ, ಕೆಂಪಯ್ಯ, ಕುಮಾರ್ ಹೊಸಹಟ್ಟಿ, ವೆಂಕಟೇಶ, ರಂಗಸ್ವಾಮಿ, ನಂದೀಶ್, ಕೆಂಪೇಗೌಡ ಇನ್ನಿತರರು ಹಾಜರಿದ್ದರು.
Comments are closed.