ಕುಣಿಗಲ್: ಸೋಮವಾರದೊಳಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ನರೇಗ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಶಾಲಾ ಮಕ್ಕಳಿಗೆ ಗ್ರಾಪಂನಲ್ಲೆ ಶೌಚ ಮಾಡಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ತಾಲೂಕಿನ ಯಡಿಯೂರು ಹೋಬಳಿಯ ನಾಗಸಂದ್ರ ಗ್ರಾಮ ಪಂಚಾಯಿತಿ ಸಮೀಪದಲ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು 150 ಮಕ್ಕಳಿದ್ದಾರೆ. ಬಹುತೇಕ ಹೆಣ್ಣು ಮಕ್ಕಳಿರುವ ಕಾರಣ ಇರುವ ಹಳೆ ಶೌಚಾಲಯ ಸಾಲದೆ ಮಕ್ಕಳು ಸರತಿ ಸಾಲಿನಲ್ಲಿ ನಿಲ್ಲವುದನ್ನು ನೋಡಲಾರದೆ, ಗ್ರಾಮಸ್ಥರು ನರೇಗಾ ಯೋಜನೆಯಡಿಯಲ್ಲಿ ಸೇರಿಸಿ 5.20 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿ ಐದು ಮಂದಿ ಎಂಟು ದಿನ ಕೂಲಿ ಮಾಡಿದ್ದರು. ಆದರೆ ಗ್ರಾಪಂ ಅಧ್ಯಕ್ಷ, ಪಿಡಿಒ ಯೋಜನೆಗೆ ಪೂರಕ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಸಿ ಕೂಲಿ ಹಣ ಬಿಡುಗಡೆ ಮಾಡದ ಕಾರಣ ಬೇಸತ್ತ ಗ್ರಾಮಸ್ಥರು ಜಿಪಂ ಸಿಇಒ, ತಾಪಂ ಇಒ ಅವರ ಗಮನಕ್ಕೆ ತಂದರೂ ಪ್ರಯೋಜನವಾಗದ ಕಾರಣ ಶುಕ್ರವಾರ ಶಾಲೆಯ ಹಳೆ ವಿದ್ಯಾರ್ಥಿ ಡಾ.ಸತ್ಯನಾರಾಯಣ ರಾವ್, ಶ್ರೀನಿವಾಸ್, ತಿಮ್ಮಣ್ಣ, ಎಸ್ಡಿಎಂಸಿ ಅಧ್ಯಕ್ಷ ಅರುಣ ಕುಮಾರ್, ಗ್ರಾಪಂ ಸದಸ್ಯರಾದ ಹುಚ್ಚೇಗೌಡ, ಉಮೇಶ, ಕುಮಾರ, ನಂದಿನಿ, ಲಿಂಗರಾಜ, ಮಮತ, ನಯನ, ಗೀತಾ ಇತರರು ಶುಕ್ರವಾರ ಗ್ರಾಪಂ ಮುಂದೆ ಕುಳಿತು ಧರಣಿ ನಡೆಸಿದರು.
ಪಿಡಿಒ ಸೇರಿದಂತೆ ಯಾರೊಬ್ಬರು ಕಚೇರಿಯಲ್ಲಿ ಇಲ್ಲದ ನಡೆ ಖಂಡಿಸಿ ಗ್ರಾಪಂ ಬಾಗಿಲು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿ ಡಾ.ಸತ್ಯನಾರಾಯಣ ರಾವ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಶಾಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಗ್ರಾಪಂ ಕರ್ತವ್ಯವಾಗಬೇಕು. ಇಲ್ಲಿ ನೋಡಿದರೆ ಗ್ರಾಪಂ ಅಧ್ಯಕ್ಷರು, ಪಿಡಿಒಗೆ ಇದರ ಅಗತ್ಯತೆ ಮನವರಿಕೆ ಆಗುತ್ತಿಲ್ಲ. 70 ವರ್ಷದ ಹಿಂದೆ ಶಾಲೆಯಲ್ಲಿ ತಾವು ಓದಿದ್ದು, ತಾಲೂಕಿನಲ್ಲೆ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ದಾನಿಗಳ ನೆರವಿನಿಂದ ಶ್ರಮಿಸುತ್ತಿದ್ದು, ಸ್ಥಳೀಯ ಗ್ರಾಪಂ ನಡೆ ಖಂಡನೀಯ ಎಂದರು.
ಮುಖಂಡ ಶ್ರೀನಿವಾಸ ಮಾತನಾಡಿ, ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯಿಂದ ಶಾಲೆಯ ಶೌಚಾಲಯ ನಿರ್ಮಾಣ ನೆನೆಗುದಿಗೆ ಬೀಳುವಂತಾಗಿದೆ. ಜಿಪಂ ಹಿರಿಯಾಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡು ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಬೇಕು. ಇಲ್ಲವಾದಲ್ಲಿ ಶಾಲಾ ಮಕ್ಕಳ ಶೌಚವನ್ನು ಗ್ರಾಪಂನಲ್ಲೆ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರು ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇದ್ದುದನ್ನು ಖಂಡಿಸಿ, ಮಕ್ಕಳನ್ನು ಶಾಲೆಯಿಂದ ಕರೆತಂದು ಇಂದೆ ಶೌಚ ಮಾಡಿಸಲು ಹೊರಟರು. ಸ್ಥಳದಲ್ಲಿದ್ದ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಕರೆ ತಂದರು. ಕೆಲ ಹೊತ್ತಿನ ನಂತರ ಸ್ಥಳಕ್ಕೆ ಆಗಮಿಸಿದ ಪಿಡಿಒ ಶಿವಣ್ಣ, ಗ್ರಾಪಂನಿಂದ ನರೇಗ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಲು ಎಲ್ಲಾ ಕ್ರಮವಾಗಿದ್ದು ಅಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವೇನು ಮಾಡಲಾಗದು. ಇದಕ್ಕೆ ಆಕ್ಷೇಪಿಸಿ ಧರಣಿ ನಿರತರು ನರೇಗ ಡಾಂಗಲ್ ಅಧ್ಯಕ್ಷರ ಬಳಿ ಇದೆ. ಸರ್ಕಾರಿ ಸ್ವತ್ತು ಬೆಂಗಳೂರಿಗೆ ಏಕೆ ಹೋಯಿತು ಎಂದು ಪ್ರಶ್ನಿಸಿದರಲ್ಲದೆ ಧರಣಿ ಮುಂದುವರೆಸಿದ್ದು ಸ್ಥಳಕ್ಕೆ ತಾಲೂಕು ಪಂಚಾಯಿತಿ ಇಒ ಜೋಸೆಫ್ ಭೇಟಿ ನೀಡಿದ್ದು, ಗ್ರಾಮಸ್ಥರು ವಾಗ್ವಾದ ನಡೆಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸಿದರಲ್ಲದೆ ಗ್ರಾಪಂನ ಇತರೆ ಅನುದಾನ ಬಿಡುಗಡೆಗೆ ಕಮಿಷನ್ ಕೇಳುವವರಿಗೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
Comments are closed.