ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲ: ಕೋಡಿಹಳ್ಳಿ

ಕೃಷಿ ಉತ್ಪನ್ನಗಳ ಬೆಲೆ ಕುಸಿತ- ರೈತ ಸಂಘದಿಂದ ಶೀಘ್ರ ಹೋರಾಟ

89

Get real time updates directly on you device, subscribe now.


ತುಮಕೂರು: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ತೆಂಗು ಬೆಲೆ ಕುಸಿದಿದ್ದು, ಆಡಳಿತ ಪಕ್ಷದ ಸಚಿವರಾಗಲಿ, ಶಾಸಕರಾಗಲಿ, ವಿರೋಧ ಪಕ್ಷಗಳ ಶಾಸಕರಾಗಲಿ, ಮುಖಂಡರಾಗಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಮಾತುನಾಡುತ್ತಿಲ್ಲ. ರೈತರ ಹಿತ ಕಾಯುವಲ್ಲಿ ಆಡಳಿತ ಪಕ್ಷ ಮತ್ತು ವಿರೋಧಪಕ್ಷ ವಿಫಲವಾಗಿವೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ನಿಗದಿಪಡಿಸಿರುವ ಅವೈಜ್ಞಾನಿಕ ಬೆಂಬಲ ಬೆಲೆಗಿಂತಲೂ ಮುಕ್ತ ಮಾರುಕಟ್ಟೆಯ ಬೆಲೆ ಕುಸಿದಿದೆ. ರೈತರ ವಿಧಿಯಿಲ್ಲದೆ ತಮ್ಮ ಕೊಬ್ಬರಿ ಮಾರಾಟ ಮಾಡಿ ಯಾವುದೇ ಲಾಭವಿಲ್ಲದೆ ಬರಿಗೈಯಲ್ಲಿ ಮರಳುತ್ತಿದ್ದು, ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಗ್ಗೂಡಿ ಕೊಬ್ಬರಿಗೆ ಒಂದು ಕ್ವಿಂಟಾಲ್ಗೆ ಕನಿಷ್ಠ ಪಕ್ಷ 25 ಸಾವಿರ ರೂ. ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ರಾಜಕಾರಣಿಗಳು, ಅದರಲ್ಲಿಯೂ ಆಡಳಿತ ಪಕ್ಷದ ಮಂತ್ರಿಗಳಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಹಾಗೂ ಶಾಸಕರು ಮತ್ತು ವಿರೋಧಪಕ್ಷಗಳ ಮುಖಂಡರು ಮುಂದಿನ ಚುನಾವಣೆಯನ್ನು ಹೇಗೆ ಗೆಲ್ಲಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆಯೇ ವಿನಹ ಕೊಬ್ಬರಿ ಬೆಲೆ ಕುಸಿದಿರುವ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಇಷ್ಟು ಕೆಳಮಟ್ಟಕ್ಕೆ ಬೆಲೆ ಕುಸಿಯಲು ನೆರೆಯ ದೇಶಗಳಾದ ಮಲೇಷಿಯಾ, ಇಂಡೋನೇಷಿಯಾ, ಶ್ರೀಲಂಕಾದಿಂದ ತೆಂಗು ಮತ್ತು ಅದರ ಉತ್ಪನ್ನಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ದೇಶಕ್ಕೆ ಆಮದಾಗಿರುತ್ತಿರುವುದೇ ಕಾರಣ. ಆದರೆ ಈ ಬಗ್ಗೆ ಕೇಂದ್ರದ ಯಾವೊಬ್ಬ ಸಚಿವರು ಮಾತನಾಡುತಿಲ್ಲ. ಸದನದಲ್ಲಿ ತಮ್ಮ ವಾಕ್ಚಾತುರ್ಯದಿಂದ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಜೆ.ಸಿ.ಮಾಧುಸ್ವಾಮಿ ಸಹ ಈ ವಿಚಾರವನ್ನು ಸದನದಲ್ಲಿ ಚರ್ಚಿಸದಿರುವುದು ಈ ಸರಕಾರಕ್ಕೆ ರೈತರ ಬಗ್ಗೆ ಇರುವ ಹುಸಿ ಕಾಳಜಿ ತೋರಿಸುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ರೈತರ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾಧ್ಯಕ್ಷ ಆನಂದ ಪಟೇಲ್, ಗೌರವಾಧ್ಯಕ್ಷ ಧನಂಜಯ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್, ವಿವಿಧ ತಾಲೂಕುಗಳ ಅಧ್ಯಕ್ಷರಾದ ಅನಿಲ್, ಸಿದ್ದರಾಜು, ರುದ್ರೇಗೌಡ, ಕೀರ್ತಿ ಹಳೆಸಂಪಿಗೆ, ಲಕ್ಷ್ಮಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!