ತುಮಕೂರು: ಕೊರಮ, ಕೊರಚ, ಲಂಬಾಣಿ ಮತ್ತು ಬೋವಿ ಜಾತಿಗಳಿಗೆ ಮಾರಕವಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಸಾಧಕ ಭಾದಕಗಳ ಕುರಿತು ಸದನದಲ್ಲಿ ಚರ್ಚೆ ನಡೆಸುವ ಬದಲಾಗಿ ಸಚಿವ ಸಂಪುಟದ ಮುಂದಿಟ್ಟು ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವ ಸರಕಾರದ ನಡೆಯನ್ನು ತುಮಕೂರು ಜಿಲ್ಲಾ ಬೋವಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ಊರುಕೆರೆ ಉಮೇಶ್ ತಿಳಿಸಿದ್ದಾರೆ.
ನಗರದ ಬೋವಿ ಸಮಾಜದ ವಿದ್ಯಾರ್ಥಿ ನಿಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಂತೆ ಕೊಲಂಬೋ ಸಮುದಾಯದ ಜೊತೆಗೆ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸುಮಾರು 99 ಜಾತಿಗಳು ಒಗ್ಗೂಡಿ ಜನವರಿ 10 ರಂದು ನಡೆಸಿದ ಬೃಹತ್ ಪ್ರತಿಭಟನೆಗೆ ಹೆದರಿದ ಸರಕಾರ ಸದರಿ ವರದಿಯನ್ನು ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಸದೆಅದರಲ್ಲಿರುವ ಅಂಶಗಳು ಹಾಗೂ ಸಾಧಕ, ಭಾದಕಗಳ ಕುರಿತು ಚರ್ಚೆ ನಡೆಸಿ ಜನ್ನಾಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬದಲು ಸಚಿವ ಸಂಪುಟದ ಸಭೆಯಲ್ಲಿಟ್ಟು ಯಥಾವತ್ತು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವುದು ಅತ್ಯಂತ ಖಡನೀಯ. ಇದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿಯೇ ಒಂದು ಜಾತಿಯನ್ನು ತುಷ್ಟಿಕರಿಸುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರವೇ ನೇಮಕ ಮಾಡಿದ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸಿ ಅದನ್ನು ಜಾರಿಗೆ ತರುವ ಕೆಲಸವನ್ನು ಈ ಹಿಂದಿನಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ನ್ಯಾ.ಸದಾಶಿವ ವರದಿಯೇ ಅವೈಜ್ಞಾನಿಕ ಎಂಬ ಅಂಶವನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಶೇ.99 ಜಾತಿಗಳು ವರದಿ ಮಂಡನೆಯಾದ ದಿನದಿಂದಲೂ ಪ್ರತಿಪಾದಿಸುತ್ತಾ ಬಂದಿದ್ದರೂ ಇದುವರೆಗೂ ಅದನ್ನು ಸಾರ್ವಜನಿಕ ಚರ್ಚೆಗೆ ಬಿಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾದಿತ ಸಮುದಾಯಗಳ ಮನವಿಗೆ ಸ್ಪಂದಿಸದಿರುವ ಬಿಜೆಪಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಊರುಕೆರೆ ಉಮೇಶ್ ಎಚ್ಚರಿಕೆ ನೀಡಿದರು.
ಬಿಜೆಪಿ ಪ್ರತಿಪಾದಿಸುತ್ತಿರುವ ಒಳಮೀಸಲಾತಿ ವರ್ಗೀಕರಣ ಎಂಬುದು ಒಂದು ಚುನಾವಣಾ ಗಿಮಿಕ್ ಆಗಿದ್ದು, ಈ ಹಿಂದಿನ ಅಂದರೆ ಶಿರಾ ಉಪ ಚುನಾವಣೆಯಲ್ಲಿ ನೀಡಿದ್ದ ಕಾಡುಗೊಲ್ಲರ ಅಭಿವೃದ್ಧಿ ನಿಗಮ, ಮದಕನಳ್ಳಿ ಕಲ್ಲುಗಣಿಗಾರಿಕೆ ಭರವಸೆ ಏನಾದವು ಎಂಬುದನ್ನು ಗಮನಿಸಿದರೆ ಇದು ಒಂದು ಚುನಾವಣಾ ಗಿಮಿಕ್ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಮಾಡಿರುವುದಾಗಿ ಬೊಬ್ಬೆ ಹೊಡೆದ ಸರಕಾರಕ್ಕೆ ಈಗಾಗಲೇ ಹೈಕೋರ್ಟ್ ನೊಟೀಸ್ ನೀಡಿದೆ.
ಆರ್ಥಿಕ ದುರ್ಬಲರಿಗೆ ನೀಡಿದ ಶೇ.10 ಮೀಸಲಾತಿಯನ್ನು ಸಂವಿಧಾನದ ಪರಿಚ್ಚೇದ 9ಕ್ಕೆ ಸೇರಿಸಲು ತರಾತುರಿಯಲ್ಲಿ ಕೆಲಸ ಮಾಡಿದ ಸರಕಾರಗಳು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಪ್ರಕರಣದಲ್ಲಿ ಮಾತ್ರ ಇನ್ನೂ ಮೀನಾಮೇಷ ಎಣಿಸುತ್ತಿದೆ. ಅದೇ ರೀತಿ ನ್ಯಾ.ಸದಾಶಿವ ಆಯೋಗ ವರದಿ ಶಿಫಾರಸ್ಸು ಕೂಡ ಚುನಾವಣೆಯಲ್ಲಿ ಆ ಸಮುದಾಯದ ಮತ ಸೆಳೆಯುವ ಒಂದು ಭಾಗವಾಗಿದೆ. ಇದನ್ನು ಪರಿಶಿಷ್ಟ ಜಾತಿಯ ಇತರೆ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು ಎಂದು ಉಮೇಶ್ ಮನವಿ ಮಾಡಿದರು.
ಈ ವೇಳೆ ಪಾಲಿಕೆ ಸದಸ್ಯ ಎಸ್.ಮಂಜುನಾಥ್, ಜಿಲ್ಲಾ ಬೋವಿ ಸಮಾಜದ ಕಾರ್ಯದರ್ಶಿ ವೆಂಕಟಸ್ವಾಮಯ್ಯ, ನಿರ್ದೇಶಕ ಹನುಮಂತರಾಯಪ್ಪ, ಯುವ ಮುಖಂಡರಾದ ಭೂತೇಶ್, ಪುರುಷೋತ್ತಮ್, ಕಾಶಿನಾಥ್, ಶ್ರೀರಂಗಪ್ಪ, ತಿಪಟೂರು ತಾಲೂಕು ಅಧ್ಯಕ್ಷ ಶಶಿಧರ್ ಐಯ್ಯನಬಾವಿ ಮತ್ತಿತರರು ಇದ್ದರು.
Comments are closed.