ಕುಣಿಗಲ್: ಆಹಾರ ಅರಸಿ ಕರಡಿಯೊಂದು ಓಡೇ ಭೈರವೇಶ್ವರ ಸ್ವಾಮಿ ದೇವಾಲಯದ ಸಮೀಪ ಸುಳಿದಾಡಿ ದೇವಾಲಯದ ಬಾಗಿಲಿಗೆ ನಿಂತು ಮೈದಡವಿಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿ ಭೈರವನ ಸೇವೆಗೆ ಬಂದ ಜಾಂಬವಂತ ಎಂಬ ತಲೆ ಬರಹದಡಿ ಖ್ಯಾತಿ ಹೊಂದುತ್ತಿದೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹೇಮಗಿರಿ ವರದರಾಜ ಸ್ವಾಮಿ ಬೆಟ್ಟದ ಹಿಂಬದಿಯಲ್ಲಿರುವ ಅರಮನೆ ಹೊನ್ನಮಾಚನ ಹಳ್ಳಿ ಗ್ರಾಮಕ್ಕೆ ಸೇರಿದ್ದ ಸಿದ್ಧರ ತಾಣವಾದ ಹಾಗೂ ಹೇಮಗಿರಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಓಡೇ ಭೈರವೇಶ್ವರ ಸ್ವಾಮಿ ದೇವಾಲಯ ಇದೆ. ದೇವಾಲಯದಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು, ಶನಿವಾರ ಬೆಳಗ್ಗೆ ದೇವಾಲಯದ ಸಿಬ್ಬಂದಿ ಬಂದು ಸಿಸಿ ಟಿವಿ ದೃಶ್ಯ ಪರಿಶೀಲಿಸಿದಾಗ ಬೆಳಗ್ಗೆ ಆರುವರೆ ಗಂಟೆ ಸಮಯದಲ್ಲಿ ಆಹಾರ ಅರಸಿ ಕರಡಿಯೊಂದು ಬಂದಿದ್ದು, ದೇವಾಲಯ ಮುಂಬದಿ ಓಡಾಡಿ, ದೇವಾಲಯದ ಮುಂಬಾಗಿಲ ಕಬ್ಬಿಣದ ಗೇಟ್ಗೆ ಬೆನ್ನು ಮಾಡಿ ಮೈದಡವಿಕೊಂಡು ಮುಂದೆ ಸಾಗುವ ದೃಶ್ಯ ಇದೆ.
ಮೂವತ್ತು ಸೆಕೆಂಡ್ ವೀಡಿಯೋ ತಾಲೂಕಿನಾದ್ಯಂತ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದು, ಕೆಲವರು ಭೈರವನ ದರ್ಶನಕ್ಕೆ ಬಂದ ಜಾಂಬವಂತ ಎಂಬ ತಲೆ ಬರಹ ನೀಡಿ ವೀಡಿಯೋ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಓಡೇ ಭೈರವೇಶ್ವರ ಸ್ವಾಮಿ ದೇವಾಲಯವೂ ರಕ್ಷಿತ ಅರಣ್ಯ ಪ್ರದೇಶದ ಬೆಟ್ಟದಲ್ಲಿರುವ ಕಾರಣ ವಿಶೇಷ ದಿನಗಳಲ್ಲಿ ಮಾತ್ರ ಜನರು ಓಡಾಡುತ್ತಾರೆ ಉಳಿದಂತೆ ನಿರ್ಜನ ಪ್ರದೇಶವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಬೆಟ್ಟ ಸೇರಿಕೊಂಡಿದೆ. ಈ ಹಿಂದೆಯೂ ಆಹಾರ ಅರಸಿ ಕರಡಿಗಳು ದೇವಾಲಯಗಳ ಬಳಿ ಸಂಚರಿಸುತ್ತಿದ್ದು ಇದೀಗ ಸಿಸಿ ಟಿವಿ ಅಳವಡಿಕೆ ಮಾಡಿದ್ದರಿಂದ ದೃಶ್ಯ ಸೆರೆಯಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಕರಡಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದು, ಇದೀಗ ದೇವಾಲಯ ಸಮೀಪ ಕರಡಿ ಕಾಣಿಸಿಕೊಂಡಿರುವುದು ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ.
ಅರಣ್ಯ ಪ್ರದೇಶದೊಳಗೆ ದೇವಾಲಯ ಬರುವ ಕಾರಣ ಅರಣ್ಯ ಸಿಬ್ಬಂದಿ ಭಕ್ತರನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆ ಫಲಕ ಅಳವಡಿಸಿ ಅಗತ್ಯ ಮುನ್ನಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
Comments are closed.