ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಪೇ ಸಿಎಂ ಅಭಿಯಾನ ದೊಡ್ಡ ಸದ್ದು ಮಾಡಿ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ತುಮಕೂರಿನಲ್ಲಿ ಪೇ ಎಂಎಲ್ಎ ಅಭಿಯಾನ ಆರಂಬವಾಗಿದ್ದು, ನಗರದ ಪ್ರಮುಖ ಗೋಡೆಗಳ ಮೇಲೆ ಪೇ ಎಂಎಲ್ಎ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಶಾಸಕ ಜಿ.ಬಿ.ಜ್ಯೋತಿಗಣೇಶ್ ವಿರುದ್ಧ ಈ ರೀತಿ ಪೋಸ್ಟರ್ ಅಂಟಿಸುವ ಮೂಲಕ ಯೂತ್ ಕಾಂಗ್ರೆಸ್ ಪೇ ಎಂಎಲ್ಎ ಅಭಿಯಾನ ಆರಂಭಿಸಿದ್ದು, ಇದಕ್ಕೆ ಬಿಜೆಪಿ ಯುವ ಮೋರ್ಚಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಭಿಯಾನ ಶುರು ಮಾಡಿದ್ದು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಫೋಟೊ ಒಳಗೊಂಡಿರೋ ಪೇ ಎಂಎಲ್ಎ ಪೋಸ್ಟರ್ ಹಾಕಲಾಗಿದೆ.
ನಿಮಗೆ ಕೆಲಸ ಆಗಬೇಕೆ ನನಗೆ ಪೇ ಮಾಡಿ, ಭ್ರಷ್ಟಚಾರ ನನ್ನ ಮೊದಲ ಆದ್ಯತೆ ಎಂಬ ಬರಹಗಳಿರುವ ಪೋಸ್ಟರ್ ಗಳನ್ನು ನಗರದ ಟೌನ್ ಹಾಲ್ ಸರ್ಕಲ್, ಬಿ.ಎಚ್.ರಸ್ತೆ, ಹೊರಪೇಟೆ ಸೇರಿದಂತೆ ಹಲವು ಭಾಗಗಳಲ್ಲಿ ಗೋಡೆಗಳ ಮೇಲೆ ಹಾಕಲಾಗಿದೆ. ತುಮಕೂರು ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಯಲ್ಲಿ ಲಂಚದ ಡೀಲ್ ಹಾಗೂ ಕಾಮಗಾರಿಯಲ್ಲಿ ಶಾಸಕ ಜ್ಯೋತಿ ಗಣೇಶ್ ಪರ್ಸೆಂಟೇಜ್ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ.
ಪೋಸ್ಟರ್ ಅಂಟಿಸಿದ ಹುಡುಗರನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.
ಪೇ ಎಂಎಲ್ಎ ಪೋಸ್ಟರ್ ಕುರಿತು ಪ್ರತಿಕ್ರಿಯಿಸಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ಪಕ್ಷದ ವತಿಯಿಂದ ತುಮಕೂರು ನಗರದಲ್ಲಿ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಶುರು ಮಾಡಿದ್ದು ತುಮಕೂರು ನಗರದಲ್ಲಿ ಸ್ಮಾರ್ಟ್ಸಿಟಿ ಹೆಸರಿನಲ್ಲಿ ಸಾಕಷ್ಟು ಕಳಪೆ ಕಾಮಗಾರಿ ನಡೆದಿರುವುದು ಭ್ರಷ್ಟಾಚಾರಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಭ್ರಷ್ಟಾಚಾರದ ಬಗ್ಗೆ ತಿಳಿಸುವ ಉದ್ದೇಶದಿಂದ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪೇ ಎಂಎಲ್ಎ ಪೋಸ್ಟರ್ ಅಭಿಯಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ವೈ.ಯಶಸ್ ರಾತ್ರೋ ರಾತ್ರಿ ಕಳ್ಳರಂತೆ ಬಾಡಿಗೆ ವ್ಯಕ್ತಿಗಳನ್ನು ಕರೆತಂದು ಭಿತ್ತಿ ಪತ್ರ ಅಂಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.