ತುಮಕೂರು: ಮೈದಾಳ ಕೆರೆ ಅಭಿವೃದ್ಧಿ ವಿಚಾರದಲ್ಲಿ ಕಡೆಗಣನೆಯಾಗಿದೆ ಏಕೆ ಎಂದು ಪ್ರಶ್ನಿಸಿ ತುಮಕೂರು ಜಿಲ್ಲಾಧಿಕಾರಿ, ಕಾನೂನು ಪ್ರಾಧಿಕಾರಕ್ಕೆ ರಾಜ್ಯ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ದಶಕಗಳ ಕಾಲ ತುಮಕೂರು ಮಹಾನಗರಕ್ಕೆ ನೀರು ಪೂರೈಸುತ್ತಿದ್ದ ಊರ್ಡಿಗೆರೆ ಹೋಬಳಿ ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಮೈದಾಳ ಕೆರೆಯಲ್ಲಿ ಹಲವು ದಶಕಗಳಿಂದ ಹೂಳು ತುಂಬಿ, ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಅಕ್ರಮ ಮಣ್ಣು ಚಟುವಟಿಕೆ, ಮರಳು ಸಾಗಾಣಿಕೆಗೆ ದಾರಿ ಮಾಡಿಕೊಟ್ಟಿದ್ದು, ಭೂಗಳ್ಳರಿಂದ ಕೆರೆ ಒತ್ತುವರಿಯೂ ನಡೆಯುತ್ತಿದೆ.
ಈ ಐತಿಹಾಸಿಕ ಮೈದಾಳ ಕೆರೆಯ ಸರ್ವೆ ನಡೆಸಿ, ಹೂಳು ಎತ್ತಿ, ಕೆರೆಯ ಗಡಿ ಗುರುತಿಸಿ ಅಕ್ರಮ ಒತ್ತುವರಿ ಹಾಗೂ ಅಕ್ರಮ ಮಣ್ಣು ಸಾಗಾಣೆ ತಡೆದು, ಅಭಿವೃದ್ಧಿ ಪಡಿಸಬೇಕೆಂದು ಕೋರಿ ರಾಜ್ಯ ಹೈಕೋರ್ಟ್ ಗೆ ವಕೀಲ ಎಲ್.ರಮೇಶ್ ನಾಯಕ್ ಅವರು ಸಾರ್ವಜನಿಕ ಹಿತಾಸಕ್ತಿ ಡಬ್ಲ್ಯೂಪಿ.ನಂ.3846/2023(ಪಿಐಎಲ್) ಅರ್ಜಿ ಸಲ್ಲಿಸಿದ್ದರು.
ಫೆ.23ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ವಿಭಾಗೀಯ ಪೀಠ ಮುಖ್ಯ ನ್ಯಾಯಧೀಶರು ರಾಜ್ಯ ಸರ್ಕಾರಕ್ಕೆ, ತುಮಕೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೋಟೀಸ್ ಜಾರಿ ಮಾಡಿ 3 ವಾರಗಳಲ್ಲಿ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಆದೇಶಿಸಿದ್ದಾರೆ.
Comments are closed.