ಕೃಷಿ ಸನ್ಮಾನ್ ಯೋಜನೆ ರೈತರಿಗೆ ವರದಾನ: ಜಿಎಸ್ ಬಿ

73

Get real time updates directly on you device, subscribe now.


ತುಮಕೂರು: ದೇಶದ ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2018ರಲ್ಲಿ ಜಾರಿಗೆ ತಂದ ಕೃಷಿ ಸನ್ಮಾನ್ ಯೋಜನೆಯೂ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ತಾಲೂಕಿನ ಹಿರೇಹಳ್ಳಿ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕೃಷಿ ಸನ್ಮಾನ್ ಯೋಜನೆಯ ಕೃಷಿ ಸನ್ಮಾನ ನಿಧಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಯುವ ಜನರಿಗೆ ತೆಂಗಿನ ಮರ ಹತ್ತುವ ಯಂತ್ರ ವಿತರಿಸಿ ಮಾತನಾಡಿ, ವರ್ಷಕ್ಕೆ ಆರು ಸಾವಿರ ರೂಗಳನ್ನು ಮೂರು ಕಂತುಗಳಲ್ಲಿ ವಿತರಿಸುವ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಇದಕ್ಕೆ ಪೂರಕವಾಗಿ ಅಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವೂ ವಾರ್ಷಿಕ 4 ಸಾವಿರ ರೂ. ಸಹಾಯ ಧನ ನೀಡುವ ಮೂಲಕ ವರ್ಷಕ್ಕೆ 10 ಸಾವಿರ ರೂ. ಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡುವ ಮೂಲಕ ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ನೆರವಾಗುವಂತೆ ಮಾಡಿದ್ದಾರೆ. ಈ ವರ್ಷದ ಮೂರನೇ ಕಂತನ್ನು ಪ್ರಧಾನಿಯವರೇ ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.

ಪ್ರಧಾನ ಮಂತ್ರಿಗಳ ಕೃಷಿ ಸನ್ಮಾನ ಯೋಜನೆ ಬಡವರು ಮತ್ತು ಮಧ್ಯಮ ವರ್ಗದ ರೈತರಿಗಾಗಿಯೇ ಮಾಡಿದ ಯೋಜನೆ, ಇದನ್ನು ದೊಡ್ಡ ಹಿಡುವಳಿದಾರರು ಪಡೆಯುವುದು ಅಪರಾಧ, ಸಾವಿರಾರು ಕೋಟಿ ಹಣ ಖರ್ಚು ಮಾಡಿ ಡ್ಯಾಂ ಕಟ್ಟಿ, ನೂರಾರು ಕಿ.ಮೀ. ದೂರದಿಂದ ನಾಲೆ ತಂದು ಕೆರೆಗಳಿಗೆ ನೀರು ತುಂಬಿಸಿದರೆ ರೈತರು ಸರಕಾರ ನೀಡುವ ಪುಕ್ಕಟ್ಟೆ ಅಕ್ಕಿ ಸೇರಿದಂತೆ ಹಲವಾರು ಸವಲತ್ತು ಪಡೆದು ಹೊಲ ಗದ್ದೆಗಳಲ್ಲಿ ಕೆಲಸ ಮಾಡುವುದನ್ನೇ ಮರೆತಿದ್ದಾರೆ. ಸರಕಾರವೇ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ದುಡಿದು ತಿನ್ನುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಸಂಸದ ಜಿ.ಎಸ.ಬಸವರಾಜು ನುಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್.ರವಿ ಮಾತನಾಡಿ, ಪಿಎಂ ಕಿಸಾನ್ ನಲ್ಲಿ ವಾರ್ಷಿಕ ಕೇಂದ್ರದಿಂದ ಆರು ಸಾವಿರ ಮತ್ತು ರಾಜ್ಯದಿಂದ 4 ಸಾವಿರ ಸೇರಿ ಒಟ್ಟು 10 ಸಾವಿರ ರೈತರಿಗೆ ದೊರೆಯಲಿದೆ. ರೈತರು ಕೃಷಿ ಕಾಲದಲ್ಲಿ ಕೃಷಿಗೆ ಪೂರಕವಾದ ಬೀಜ, ರಸಗೊಬ್ಬರ ಇನ್ನಿತರ ಪರಿಕರ ಕೊಳ್ಳಲು ಅನುಕೂಲ ಮಾಡುತ್ತಿದೆ. ಎಲ್ಲಾ ವರ್ಗದ ರೈತರು ಅರ್ಹರು, ಇಂತಿಷ್ಟೇ ಪ್ರಮಾಣದ ಭೂಮಿ ಇರಬೇಕು ಎಂಬ ನಿಯಮವಿಲ್ಲ. ಆದಾಯ ತೆರಿಗೆ ಪಾವತಿಸುವ ರೈತರು, ಸರಕಾರಿ ನೌಕರರು, ನಿವೃತ್ತ ಸರಕಾರಿ ನೌಕರರು ಹಾಗೂ ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಈ ಯೋಜನೆಯ ಲಾಭ ಪಡೆಯುವಂತಿಲ್ಲ. ಬೆಳಗಾಂ ನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಒಂದು ಬಟನ್ ಒತ್ತುವ ಮೂಲಕ 14 ಸಾವಿರ ಕೋಟಿ ರೂ. ಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಲೋಗಾನಂದನ್ ವಹಿಸಿದ್ದರು. ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯಮ್ಮ, ಉಪ ಕೃಷಿ ನಿರ್ದೇಶಕ ಟಿ.ಎನ್.ಅಶೋಕ್, ಮಧುಗಿರಿ ಕೃಷಿ ಉಪನಿರ್ದೇಕಿ ಜಿ.ದೀಪಶ್ರೀ, ಕೃಷಿ ವಿಜ್ಞಾನಿಗಳಾದ ಜಗದೀಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!