ವಿದ್ಯಾರ್ಥಿಗಳಿಗೆ ಬಳಕೆದಾರ ಸ್ನೇಹಿ ತಂತ್ರಜ್ಞಾನ ವ್ಯವಸ್ಥೆ ಅಗತ್ಯ

75

Get real time updates directly on you device, subscribe now.


ತುಮಕೂರು: ವಿಶ್ವ ವಿದ್ಯಾಲಯಗಳು, ವಿದ್ಯಾ ಸಂಸ್ಥೆಗಳು ತಂತ್ರಜ್ಞಾನ ಒಪ್ಪಿಕೊಂಡು ಅನುಷ್ಠಾನಗೊಳಿಸಿ ಶೈಕ್ಷಣಿಕವಾಗಿ ದೇಶದ ಅಭಿವೃದ್ಧಿಗೆ ದಾಪುಗಾಲಿಟ್ಟಿರುವುದು ಗಮನಾರ್ಹ. ಅನುಸರಣೀಯ ಹೆಜ್ಜೆಗಳ ಮೂಲಕ ಬಳಕೆದಾರ ಸ್ನೇಹಿ ತಂತ್ರಜ್ಞಾನ ವ್ಯವಸ್ಥೆ ಅಳವಡಿಸಿಕೊಂಡು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ತುಮಕೂರು ವಿಶ್ವ ವಿದ್ಯಾಲಯ ರಾಜ್ಯದಲ್ಲೇ ಹೆಸರುವಾಸಿಯಾಗಿದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯ ಆಯೋಜಿಸಿದ್ದ ಸಮಗ್ರ ವಿಶ್ವ ವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಸಂಗ್ರಹಾಗಾರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಿಖರತೆ, ವಿಶ್ವಾಸಾರ್ಹತೆ, ಸಮಯ ನಿರ್ವಹಣೆ ತಂತ್ರಜ್ಞಾನದ ಮೂಲ ಅಂಶಗಳಾಗಿವೆ. ಇದರಿಂದ ಮಾನವ ಶಕ್ತಿಯ ಬಳಕೆ ಕಡಿಮೆ ಮಾಡಬಹುದು. ಹಾಗೆಯೇ ವೇಗವಾಗಿ ಕೆಲಸ ಮಾಡಬಹುದು. ಬದಲಾವಣೆ ನಿರಂತರ, ನಾವೆಲ್ಲರೂ ಕಾಲದ ಜೊತೆ ಸಾಗಿದರೆ ಯಾವುದೇ ಸಮಸ್ಯೆಗೂ ಪರಿಹಾರ ಕಂಡು ಹಿಡಿಯಬಹುದು ಎಂದರು.

ಉನ್ನತ ಶಿಕ್ಷಣ ಇಲಾಖೆಯ ರಾಜ್ಯಯೋಜನಾ ನಿರ್ವಹಣಾ ಘಟಕ ಹಾಗೂ ವಿಶ್ವ ವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ ನಿರ್ದೇಶಕ ಡಾ.ಭಾಗ್ಯವಾನ ಎಸ್. ಮುದಿಗೌಡ್ರ ಮಾತನಾಡಿ, ಡಿಜಿಟಲ್ ವ್ಯವಸ್ಥೆಯ ಅರಿವಿದ್ದರೆ ಹಿಡಿತ ತಾನಾಗಿಯೇ ಬರುತ್ತದೆ. ಕೌಶಲ ಬೆಳವಣಿಗೆಯಿಂದ ಯಾವುದೇ ಹೊಸ ತಂತ್ರಜ್ಞಾನವನ್ನಾದರೂ ಅಳವಡಿಸಿಕೊಳ್ಳಬಹುದು. ಇದಕ್ಕೆ ಸಮಗ್ರ ತರಬೇತಿಯೇ ಸರಿಯಾದ ಕ್ರಮ ಎಂದು ಹೇಳಿದರು.

ದತ್ತಾಂಶ ಸಂಗ್ರಹಣೆ, ಕ್ರೋಢೀಕರಣ, ನಿರ್ವಹಣೆ, ತಿಳುವಳಿಕೆ, ತಾಂತ್ರಿಕ ಸಹಾಯ ಇವೆಲ್ಲವೂ ತಂತ್ರಜ್ಞಾನದ ಆಧಾರದ ಮೇಲೆ ನಿಂತಿದೆ. ತಂತ್ರಜ್ಞಾನ ಅಭ್ಯಾಸವಾದಗಲೇ ಅದರ ವ್ಯಾಪ್ತಿಯ ಮಟ್ಟದ ಅರಿವು ನಮಗಾಗುವುದು ಎಂದರು.
ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಮಾತನಾಡಿ, ಪರಿವರ್ತನಾಶೀಲ ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡುವುದು, ಹೊಸ ತಂತ್ರಜ್ಞಾನ ಬಳಕೆಯಿಂದಾಗಿ ಕಲಿಕೆಯನ್ನು ಸುಗಮಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಸಮಗ್ರ ವಿಶ್ವ ವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ ನೋಡಲ್ ಅಧಿಕಾರಿ ಡಾ.ರೂಪೇಶ್ಕುಮಾರ್.ಎ, ರಾಷ್ಟ್ರೀಯ ಶೈಕ್ಷಣಿಕ ಸಂಗ್ರಹಾಗಾರದ ನೋಡಲ್ ಅಧಿಕಾರಿ ಡಾ.ನರಹರಿ.ಎನ್, ಪರೀಕ್ಷಾಂಗ ವಿಭಾಗದ ಉಪ ಕುಲಸಚಿವ ಡಾ.ಮುನಿರಾಜು.ಎಂ, ಶೈಕ್ಷಣಿಕ ವಿಭಾಗದ ಉಪ ಕುಲಸಚಿವೆ ಡಾ.ಮಂಗಳಗೌರಿ ಎಂ.ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!