ಕುಣಿಗಲ್: ಸಜ್ಜನ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಕುಣಿಗಲ್ ತಾಲೂಕಿನಲ್ಲಿ ಇಂದು ಲೂಟಿಕೋರ ರಾಜಕಾರಣಿಗಳು ಹೆಚ್ಚಾಗಿದ್ದು ಯಾವುದೇ ಪಕ್ಷ ಭೇದವಿಲ್ಲದೆ ತಾಲೂಕಿನ ಸಂಪನ್ಮೂಲ ಕಬಳಿಸುವ ರಾಜಕಾರಣದಿಂದ ಕುಣಿಗಲ್ ತಾಲೂಕು ರಕ್ಷಣೆ ಮಾಡಬೇಕಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.
ಸೋಮವಾರ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಕಟ್ಟೋಣ ಕರುನಾಡು ಸಂಕಲ್ಪ ಯಾತ್ರೆಯ ಅಂಗವಾಗಿ ತಾಲೂಕಿನಲ್ಲಿ ಐದು ದಿನಗಳ ಕಾಲ ಪಕ್ಷದ ಪರ ಪ್ರಚಾರ ಆರಂಬಿಸಿ ಮಾತನಾಡಿ, ತಾಲೂಕಿನಲ್ಲಿ ಹಾಲಿ ಶಾಸಕರು ಅಭಿವೃದ್ಧಿ ಆಧಾರದ ಮೇಲೆ ಮತ ಯಾಚಿಸದೆ ಕುಕ್ಕರ್, ಡಿನ್ನರ್ ಸೆಟ್ ನೀಡುವ ಮೂಲಕ ಮತದಾರರಿಗೆ ಆಮೀಷವೊಡ್ಡುತ್ತಿದ್ದಾರೆ. ತಾಲೂಕಿನಾದ್ಯಂತ ಅಕ್ರಮ ಗಣಿಕಾರಿಗೆ ನಡೆಸುತ್ತಿದ್ದರೆ ಆತನ ಚೇಲಾಗಳು ಅಕ್ರಮ ಕಾಮಗಾರಿಗಳ ನಡೆಸುತ್ತಾ ಜನರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.
ಜೆಡಿಎಸ್, ಬಿಜೆಪಿ ಪಕ್ಷಗಳು ಸಹ ಪರೋಕ್ಷ ರೀತಿಯಲ್ಲಿ ಇದೆ ಕೆಲಸ ಮಾಡುತ್ತಿವೆ. ತಾಲೂಕಿನಲ್ಲಿ ಕೆಆರ್ಎಸ್ ಪಕ್ಷದ ಸೈನಿಕರ ಸತತ ಹೋರಾಟದಿಂದ ಲಂಚವನ್ನು ಒಂದು ಮಟ್ಟಕ್ಕೆ ನಿಯಂತ್ರಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಯತ್ನಿಸುತ್ತಿದ್ದಾರೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ, ಭ್ರಷ್ಟಾಚಾರ ಮುಕ್ತ ಜನಪರ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಕೆಆರ್ಎಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದ್ದು ಮುಂದಿನ ಚುನಾವಣೆಯಲ್ಲಿ ತಾಲೂಕಿನಲ್ಲಿ ಕೆಆರ್ಎಸ್ ಪಕ್ಷದ ಅಭ್ಯರ್ಥಿ ರಘುಜಾಣಗೆರೆ ಬೆಂಬಲಿಸುವಂತೆ ಮನವಿ ಮಾಡಿದರು.
ಪಕ್ಷ ಅಧಿಕಾರಕ್ಕೆ ಬಂದಲ್ಲಿ ತಾಲೂಕು ಸೇರಿದಂತೆ ರಾಜ್ಯದಲ್ಲಿ ಮಾಡಲಾಗುವ ಅಭಿವೃದ್ಧಿ ಕಾಮಗಾರಿ, ಜನಪರ ಆಡಳಿತ, ಮುಚ್ಚಲಾಗಿರುವ ಕೈಗಾರಿಕೆಗಳ ಪುನರ್ ಆರಂಭಕ್ಕೆ ಕ್ರಮ ಕೈಗೊಳ್ಳುವುದು ಸೇರಿದಂತೆ ಮಾಸಾಶನ ಹೆಚ್ಚಳ ವಿವಿಧ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ವಿವಿಧೆಡೆ ಕರಪತ್ರ ಹಂಚುವ ಮೂಲಕ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಪಕ್ಷದ ಇತರೆ ಜಿಲ್ಲೆಗಳ ಪದಾಧಿಕಾರಿಗಳು, ಕುಣಿಗಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಾಣಗೆರೆ ರಘು ಇತರರು ಹಾಜರಿದ್ದರು.
Comments are closed.