ಕುಣಿಗಲ್: ಪದವಿ ಹಂತದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಜೊತೆ ಕ್ರೀಡಾ ಚಟುವಟಿಕೆಯ ಅವಕಾಶ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಗ್ರವಾಗಿ ಮುಂದೆ ಬರಬೇಕೆಂದು ಶಾಸಕ ಡಾ.ರಂಗನಾಥ ಹೇಳಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ತುಮಕೂರು ವಿವಿ ಅಂತರ್ ಕಾಲೇಜು ಮಹಿಳೆಯರ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಮೊದಲು ಕಬಡ್ಡಿ ರಾಷ್ಟ್ರೀಯ ಕ್ರೀಡೆಯಾಗಿದ್ದರೂ ಕಾಲ ಕ್ರಮೇಣ ಜನಾಸಕ್ತಿ ಕಡಿಮೆಯಾಯಿತು. ಇದೀಗ ಕಬಡ್ಡಿಗೆ ವಿನೂತನ ರೀತಿಯಲ್ಲಿ ಬೇಡಿಕೆ ಬಂದ ಕಾರಣ ಹೆಚ್ಚು ಜನಪ್ರಿಯತೆ ಗಳಿಸುವ ಜೊತೆಯಲ್ಲಿ ಚಲನಚಿತ್ರ ವೀಕ್ಷಿಸಿದಂತೆ ಜಾಹಿರಾತುಗಳ ನಡುವೆ ಪಂದ್ಯಾವಳಿ ನೋಡುವಷ್ಟರ ಮಟ್ಟಿಗೆ ಖ್ಯಾತಿ ಹೊಂದುತ್ತಿದೆ. ಇದೆ ರೀತಿ ಖೋ-ಖೋ ಪಂದ್ಯಾವಳಿಗಳು ಜನಮನ್ನಣೆಗಳಿಸುವ ನಿಟ್ಟಿನಲ್ಲಿ ಇಂದಿನ ಯುವ ವಿದ್ಯಾರ್ಥಿಗಳು ಉತ್ತಮ ಕೌಶಲ್ಯ, ಶ್ರಮದೊಂದಿಗೆ ಸಾಮರ್ಥ್ಯ ಪ್ರದರ್ಶಿಸಬೇಕು. ಇಂದು ಕ್ರೀಡೆಗಳು ಉದ್ಯೋಗ ಕಲ್ಪಿಸುವ ಮಾಧ್ಯಮವಾಗಿ ಹೊರ ಹೊಮ್ಮುತ್ತಿರುವುದರಿಂದ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಕ್ರೀಡೆಯಲ್ಲಿ ಸಕ್ರೀಯವಾಗಿ ಬಳಸಿಕೊಂಡು ಯಶಸ್ಸು ಸಾಧಿಸಬೇಕೆಂದರು.
ತುಮಕೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎ.ಎಂ.ಮಂಜುನಾಥ ಮಾತನಾಡಿ, ಯುವ ಜನತೆಯಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆ ಹೊರ ಹೊಮ್ಮಿಸಲು ಇಂತಹ ಪಂದ್ಯಾವಳಿ ಸಹಕಾರಿಯಾಗಿದೆ. ಇಂತಹ ಪಂದ್ಯಾವಳಿಗಳಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಹುದುಗಿರುವ ಪ್ರತಿಭೆಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲು ಸಹಕಾರಿಯಾಗುತ್ತದೆ. ತುಮಕೂರು ವಿವಿ ವತಿಯಿಂದ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು ಶೀಘ್ರದಲ್ಲೆ ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಲು ವಸತಿ ಸಹಿತ ಉತ್ತಮ ಕ್ರೀಡಾಂಗಣ ವ್ಯವಸ್ಥೆಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಪಂದ್ಯಾವಳಿಗಳಲ್ಲಿ ಒಟ್ಟು ನಾಲ್ಕು ತಂಡ ಭಾಗವಹಿಸಿದ್ದವು. ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್ ಶರೀಫ್, ಪ್ರಾಚಾರ್ಯ ಡಾ.ಆರ್.ಪುಟ್ಟರಾಜು, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜಿ.ಎಸ್.ರವೀಶ್ ಇತರರು ಇದ್ದರು.
Comments are closed.