ವಿಜ್ಞಾನದ ಸಾಧನವೇ ತಂತ್ರಜ್ಞಾನ: ವೆಂಕಟೇಶ್ವರಲು

72

Get real time updates directly on you device, subscribe now.


ತುಮಕೂರು: ಸೃಜನಶೀಲ ಆಲೋಚನೆಗಳು ಜಗತ್ತಿಗೆ ಹೊಸ ಆವಿಷ್ಕಾರಗಳನ್ನು ಕೊಡುಗೆಯಾಗಿ ನೀಡಬಲ್ಲವು. ವಿಜ್ಞಾನದ ಸ್ವರೂಪ ಅರ್ಥ ಮಾಡಿಕೊಂಡರೆ ವಿಶ್ವ ವಿದ್ಯಾಲಯಗಳು ವಿಜ್ಞಾನಿಗಳನ್ನು ತಯಾರು ಮಾಡುವ ಸಂಸ್ಥೆಯಾಗುತ್ತವೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯ ವಿಜ್ಞಾನ ಕಾಲೇಜು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಜ್ಞಾನೋತ್ಸವ- 2023 ಹಾಗೂ ಅಂತರ ಕಾಲೇಜು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನದ ಸಾಧನವೇ ತಂತ್ರಜ್ಞಾನವಾಗಿದೆ. ಪರಿಸರದ ವಿರುದ್ಧ ಹೋಗದೆ ಮಾನವನ ವಿಕಾಸಕ್ಕಾಗಿ, ಅಭಿವೃದ್ಧಿಯ ಪಥದತ್ತ ಸಾಗುವ ಯಾವುದೇ ಆವಿಷ್ಕಾರಗಳೂ ಬದುಕಿನ ಜೀವಕೋಶವಾಗಲಿದೆ. ಉನ್ನತ ಶಿಕ್ಷಣವೂ ವಿಜ್ಞಾನದ ಮೂಲಕ ತಂತ್ರಜ್ಞಾನದ ನೆರಳನ್ನು ಸೂಸುವ ಶಕ್ತಿಯಾಗಿ ಜ್ಞಾನ ವಿಕಸನಗೊಳ್ಳಬೇಕು. ಅದಕ್ಕೆ ಪ್ರೇರಣೆ ಮತ್ತು ಸ್ಫೂರ್ತಿಯ ಅವಶ್ಯಕತೆಯಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ವಿಜ್ಞಾನ ಉಪನ್ಯಾಸಕ ಕೆ.ನಟರಾಜ್, ಪ್ರಸ್ತುತ ವಿಜ್ಞಾನ ಕಲಿಕೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿಜ್ಞಾನವೂ ಸ್ವೀಕಾರ, ತಿರಸ್ಕಾರ ಹಾಗೂ ಪ್ರಶ್ನೆ, ಯೋಚನೆಯ ಅವಶ್ಯಕತೆ ಕಲಿಸಿದರೆ, ಆಸಕ್ತಿ ಮನೋಭಾವ ಪರಮ ವಿಜ್ಞಾನದ ಹೊರಳನ್ನು ಪರಿಚಯಿಸುತ್ತದೆ. ತಂತ್ರಜ್ಞಾನವೂ ಘೋರ ವಿನಾಶಕ್ಕೆ ಎಂದೂ ಕಾರಣವಾಗಬಾರದು ಎಂದರು.

ಸಕಾರಾತ್ಮಕ ಚಿಂತನೆಗಳಿಂದ ರಚನಾತ್ಮಕ ಸಂಶೋಧನೆಗಳಾಗಲಿವೆ. ಮನುಷ್ಯನ ಒಳಿತಿಗಾಗಿ ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆಗೆ ಬರಬೇಕು. ನೊಬೆಲ್ ಪುರಸ್ಕೃತ ಸಿ.ವಿ.ರಾಮನ್ ಅವರ ರಾಮನ್ಎಫೆಕ್ಟ್ ಇಂದಿಗೂ ವಿಜ್ಞಾನಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಮಾತನಾಡಿ, ವಿಜ್ಞಾನದ ವ್ಯಾಪ್ತಿ ದೊಡ್ಡದು, ಪರಿಮಿತಿಯ ರೇಖೆಯೊಳಗೆ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಂಡರೆ ಒಳಿತು ಎಂದರು.
ತುಮಕೂರು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಠ್ ಮಾತನಾಡಿ, ವಿಜ್ಞಾನ ಹಬ್ಬವೂ ಆವಿಷ್ಕಾರಗಳಿಗೆ ಕಾರಣವಾಗಬೇಕು. ಯುದ್ಧಕ್ಕೆ ಅವಕಾಶ ಮಾಡಿಕೊಡುವ ತಂತ್ರಜ್ಞಾನ ವಿನಾಶಕಾರಿಯಾಗಲಿದೆ. ವಿಜ್ಞಾನದಿಂದ ದೇಶದ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜಿನ ವಿಜ್ಞಾನೋತ್ಸವ- 2023ರ ಸಂಯೋಜಕಿ ಡಾ.ಪೂರ್ಣಿಮ.ಡಿ. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!