ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ: ಶಶಿ ಕಿಡಿ

109

Get real time updates directly on you device, subscribe now.


ತುಮಕೂರು: ಯಾವುದೇ ರೀತಿಯಾದ ಅಸಭ್ಯ ವರ್ತನೆ ಮಾಡಿಲ್ಲ. ನನ್ನ ಮೇಲೆ ದುರುದ್ದೇಶದಿಂದ ಇಲ್ಲಸಲ್ಲದ ಸೆಕ್ಷನ್ ಗಳಡಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ನಾವು ಪ್ರತಿಭಟನೆ ಮಾಡಿದ್ದೆ ತಪ್ಪು ಎನ್ನುವಂತೆ ಜೈಲಿಗೆ ಕಳುಹಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅವೈಜ್ಞಾನಿಕ ಮತ್ತು ಕಳಪೆ ಗಾಮಗಾರಿ ನಡೆದಿದ್ದು, ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಈ ಹಿಂದೆಯೂ ಅನೇಕ ಪ್ರತಿಭಟನೆ ನಡೆಸಿದ್ದು, ಅದರಂತೆಯೇ ಪೇ ಎಂಎಲ್ಎ ಪ್ರತಿಭಟನೆಯೂ ಒಂದು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ನೀತಿ ಅನುಸರಿಸುತ್ತಾ ನಗರದ ಹಾಲಿ ಶಾಸಕರು ಹಾಗೂ ಪೊಲೀಸರು ಜನರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಕಳೆದ ಶನಿವಾರ ರಾತ್ರಿ ತುಮಕೂರು ನಗರದ ಪ್ರಮುಖ ಬಡಾವಣೆಗಳಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿಯ ಅವ್ಯವಹಾರ ಹಾಗೂ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಪೇ ಎಂಎಲ್ಎ ಪೋಸ್ಟರ್ ಗಳನ್ನು ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಲಾಗಿತ್ತು. ಆ ಸಮಯದಲ್ಲಿ ಬಿಜೆಪಿಯ ಕೆಲ ಕಾರ್ಯಕರ್ತರು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ನಮ್ಮ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವಂತೆ ಹೇಳಿರುತ್ತಾರೆ. ಅದರಂತೆ ಅಂದು ರಾತ್ರಿ ಬಂಧಿಸಿರುತ್ತಾರೆ.

ಈ ವಿಚಾರವಾಗಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಮಾತನಾಡಲು ಬರಲು ಹೇಳಿದ್ದರು. ಆದ್ದರಿಂದ ನಾನು ಈ ಪೋಸ್ಟರ್ ಗಳ ಕುರಿತಾಗಿ ಮಾತನಾಡಲು ತೆರಳಿದಾಗ ಪ್ರಸ್ತುತ ಆರೋಪ ಮಾಡಿರುವ ರತ್ನಮ್ಮ ಅವರು ಸ್ಥಳದಲ್ಲಿ ಇರಲಿಲ್ಲ. ಅಲ್ಲಿ ಹಾಲಿ ಕರ್ತವ್ಯದಲ್ಲಿದ್ದ ಕೆಲ ಪೊಲೀಸ್ ಪೇದೆಗಳು ರತ್ನಮ್ಮ ಅವರೊಂದಿಗೆ ಫೋನ್ ನಲ್ಲಿ ಮಾತನಾಡುವಂತೆ ನನಗೆ ಫೋನ್ ನೀಡಿದರು. ಅವರೊಂದಿಗೆ ನಾನು ಏರುಧ್ವನಿಯಲ್ಲಿಯಷ್ಟೇ ಮಾತನಾಡಿದ್ದೇನೆ. ಯಾವುದೇ ರೀತಿಯಾದ ಅಸಭ್ಯ ವರ್ತನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಿಲ್ಲವೆಂದು ಸ್ಪಷ್ಟನೆ ನೀಡಿದರು.

ಮಾಜಿ ಶಾಸಕ ಡಾ.ಎಸ್.ರಫಿಕ್ ಅಹ್ಮದ್ ಮಾತನಾಡಿ, ನಾನು ಸಹ ಸ್ವತಃ ಆರ್ ಟಿಐ ಮೂಲಕ ಸ್ಮಾರ್ಟ್ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ಕೋರಿದ್ದು, ಅದರಲ್ಲಿ ಅಸ್ಪಷ್ಟ ಮಾಹಿತಿ ನೀಡಿ ಅಧಿಕಾರಿಗಳು ನಮ್ಮನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ. ಯಾವೊಂದು ಕಾಮಗಾರಿ ಕುರಿತಾಗಿ ಸ್ಪಷ್ಟ ಮತ್ತು ವಿವರವಾದ ಮಾಹಿತಿ ನೀಡದೆ ಕೇವಲ ಕಾಮಗಾರಿಗೆ ತಗುಲಿರುವ ವೆಚ್ಚದ ಕುರಿತಾದ ಮಾಹಿತಿ ಮಾತ್ರ ನೀಡಿರುತ್ತಾರೆ. ಇಂತಹ ಸಾಕಷ್ಟು ಉದಾಹರಣಗಳು ಇವೆ. ಆದರೆ ಸದ್ಯದಲ್ಲಿಯೇ ಅವೆಲ್ಲವನ್ನೂ ಬಹಿರಂಗಪಡಿಸುವುದಾಗಿ ತಿಳಿಸಿದರು.

ಸದುದ್ದೇಶದಿಂದ ನಮ್ಮ ಕಾರ್ಯಕರ್ತರು ಮಾಡಿರುವ ಪ್ರತಿಭಟನೆಯನ್ನು ಇವರು ಇಷ್ಟರ ಮಟ್ಟಿಗೆ ಬಿಂಬಿಸಿ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಯಾವ ರೀತಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಮಾರ್ಚ್ 2 ರಂದು ಬಿಜೆಪಿಯವರು ಹಮ್ಮಿಕೊಂಡಿರುವ ಟಿಪ್ಪು ಅವರ ನಿಜ ಕನಸುಗಳು ಎಂಬ ನಾಟಕದ ವಿರುದ್ಧ ನಾವು ಸಹ ಬೊಮ್ಮಾಯಿ, ಮೋದಿ, ಇನ್ನಿತರೆ ಬಿಜೆಪಿ ಮುಖಂಡರ ಕುರಿತಾಗಿ ವಿಭಿನ್ನ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಅತಿಕ್ ಅಹಮ್ಮದ್, ಇಕ್ಬಾಲ್ ಅಹಮದ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!