ತುಮಕೂರು: ಗಂಡು ಮತ್ತು ಹೆಣ್ಣು ಲಿಂಗಾನುಪಾತ ಸಮವಾಗಬೇಕು. ಇಲ್ಲವಾದರೆ ಸಾಮಾಜಿಕ ತೊಂದರೆ ಸಂಭವಿಸಬೇಕಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಡಿ.ಎನ್.ಮಂಜುನಾಥ್ ಹೇಳಿದರು.
ನಗರದ ಅರ್ಬನ್ ರೆಸಾರ್ಟ್ ನಲ್ಲಿ ಜಿಲ್ಲೆಯ ವೈದ್ಯರಿಗಾಗಿ ಏರ್ಪಡಿಸಿದ್ದ ಪಿಸಿ ಮತ್ತು ಪಿಎನ್ಡಿಟಿ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ಭ್ರೂಣ ಲಿಂಗ ಪತ್ತೆ ಕಾಯ್ದೆ ಪ್ರಕಾರ ಹೆಣ್ಣು ಭ್ರೂಣ ಹತ್ಯೆ ನಿಷೇಧಿಸಲಾಗಿದೆ. ಆದರೂ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೇಡಿಯೋಲಜಿಸ್ಟ್ ಗಳು ಪತ್ತೆ ಮಾಡುತ್ತಿದ್ದಾರೆ. ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ವೈದ್ಯರಿಗೆ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಲಿಂಗಾನುಪಾತವು 106 ಗಂಡು ಮಕ್ಕಳಿಗೆ 100 ಜನ ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಜನಿ ಮಾತನಾಡಿ, ಹೆಣ್ಣು ಭ್ರೂಣದ ಬಗ್ಗೆ ಮಾಹಿತಿ ಹೇಳುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಈ ಕಾಯ್ದೆ ಜಾರಿಗೆ ತರಲಾಗಿದೆ. ಆದರೂ ಜನರು ಆಗಲೇ ಹೆಣ್ಣು ಮಕ್ಕಳು ಇದ್ದಾರೆ ಎಂದು ಭ್ರೂಣ ಪತ್ತೆಗೆ ಮುಂದಾಗುತ್ತಾರೆ. ಇಂಥವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಬಿ.ರೇಖಾ, ಜಿಲ್ಲಾ ಶಸ್ತ್ರಚಿಕಿತ್ಸಕ ಅಧಿಕಾರಿ ಡಾ.ವೀಣಾ, ಡಾ.ಸನಾತ್, ಡಾ.ಮಹೇಶ್ ಮತ್ತಿತರರು ಇದ್ದರು.
Comments are closed.