ಮಧುಗಿರಿ: ರೈತರು ನೆಮ್ಮದಿಯಿಂದ ಜೀವನ ನಡೆಸಲು ಹೈನುಗಾರಿಕೆಯಿಂದ ಮಾತ್ರ ಸಾದ್ಯ ಎಂದು ಕೊರಟಗೆರೆ ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೊಸಕೆರೆ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ತುಮಲ್ ಜಿಲ್ಲಾ ರೈತರ ಮತ್ತು ಎಂಪಿಸಿಎಸ್ ನೌಕರರ ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ ಮತ್ತು ಮಧುಗಿರಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೊಂಡವಾಡಿ ಚಂದ್ರಶೇಖರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿ, ರೈತರು ಇಂದು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಅಳವಡಿಸಿಕೊಂಡಿದ್ದು, ಇದರಿಂದ ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗಿದೆ. ತುಮುಲ್ ಒಕ್ಕೂಟವು ಕಳಂಕ ರಹಿತ ಸಂಸ್ಥೆಯಾಗಿದ್ದು, ಹೈನುಗಾರಿಕೆ ವ್ಯಾಪಾರೀಕರಣವಾಗಬಾರದು ಎಂಬ ಉದ್ದೇಶದಿಂದ ರೈತರ ಆರೋಗ್ಯಕ್ಕೂ ಹೆಚ್ಚಿನ ಒತ್ತು ನೀಡಿದ್ದು, ರೈತರಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದೆ.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮತ್ತು ಹಾಲಿ ಅಧ್ಯಕ್ಷ ಮಹಲಿಂಗಯ್ಯ ಅವರು ರೈತರ ಕಲ್ಯಾಣಕ್ಕಾಗಿ, ಹೈನುಗಾರಿಕೆ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ತುಮುಲ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಇದರಿಂದ ಬಡವರಿಗೆ ಬಹಳಷ್ಟು ಅನುಕೂಲವಾಗಲಿದೆ. ನುರಿತ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ಉತ್ತಮ ಕಾರ್ಯಕ್ರಮ, ಹಾಲು ಉತ್ಪಾದಕರಿಗೆ ಬಹಳಷ್ಟು ಉತ್ತಮ ಯೋಜನೆಗಳನ್ನು ಕೊಂಡವಾಡಿ ಚಂದ್ರಶೇಖರ್ ನೀಡಿದ್ದು, ಅವರ ಅವಧಿಯಲ್ಲಿ ಬಹಳಷ್ಟು ಉತ್ತಮ ಯೋಜನೆ ರೂಪಿಸಿದ್ದರು ಎಂದರು.
ನಾನು ಶಾಸಕನಾಗಿ ಆಯ್ಕೆಯಾದ ಮೊದಲ ವರ್ಷದ ಅವಧಿಯಲ್ಲಿ ತೀವ್ರ ಬರಗಾಲ ಕಾಡುತ್ತಿದ್ದು, ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಮೇವು ಬ್ಯಾಂಕ್ ಆರಂಭಿಸಿ 6.80 ಕೋಟಿ ರೂ. ವೆಚ್ಚದಲ್ಲಿ ಮೇವನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ ಅನುಕೂಲ ಮಾಡಿಕೊಡಲಾಗಿತ್ತು. ತಾಲೂಕಿನಾದ್ಯಂತ 300 ಬೋರ್ವೆಲ್ ಕೊರೆಸಲಾಗಿತ್ತು. ನಂತರ ಎರಡು ವರ್ಷ ಕೊರೊನಾ ಮಹಾಮಾರಿ ವ್ಯಾಪಿಸಿದ ಹಿನ್ನೆಲೆಯಲ್ಲಿ ಹಣದ ಅಭಾವ ಉಂಟಾಗಿ ಅಭಿವೃದ್ಧಿ ಕಾಮಗಾರಿ ವಿಳಂಬಗೊಂಡಿತ್ತು. ಬೆಜೆಪಿ ಸರ್ಕಾರದಲ್ಲಿ ಪ್ರತಿ ರೂಪಾಯಿ ಅನುದಾನ ತರಲು ಹೋರಾಟ ನಡೆಸಬೇಕಾದ ಪರಿಸ್ಥಿತಿಯಿದ್ದು, ಆದರೂ 43 ಕೋಟಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದೆ ಕುಮಾರಸ್ವಾಮಿ ಸಿಎಂ ಆಗಲಿದ್ದು, ಮಧುಗಿರಿ ಜಿಲ್ಲೆಯಾಗಲು, ಏಕಶಿಲಾ ಬೆಟ್ಟಕ್ಕೆ ರೋಪ್ ವೇ, ಎತ್ತಿನಹೊಳೆ, ಕೈಗಾರಿಕಾ ಪ್ರದೇಶ ಆರಂಭಿಸಿ ಯುವಕ- ಯುವತಿಯರಿಗೆ ಉದ್ಯೋಗ, ಹೈಟೆಕ್ ಆಸ್ಪತ್ರೆ ತರಲು ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮಾತನಾಡಿ, ಜಿಲ್ಲೆಯಲ್ಲಿ ತುಮುಲ್ ವತಿಯಿಂದ 1300 ಸಹಕಾರ ಸಂಘಗಳ ಮೂಲಕ ರೈತರು ಆರ್ಥಿಕ ವಾಗಿ ಅಭಿವೃದ್ಧಿ ಹೊಂದಲು ಒತ್ತು ನೀಡಲಾಗಿದ್ದು, ಈ ಹಿಂದೆ ಪ್ರತಿ ನಿತ್ಯ 9 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಆದರೆ ಚರ್ಮಗಂಟು ರೋಗದಿಂದ ಇಂದು ಪ್ರತೀ ದಿನ 7 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇಂದು ಹಾಲಿಗೆ ಸಮಸ್ಯೆ ಉಂಟಾಗಿದೆ. ರೈತರಿಗೆ ಮಾರುಕಟ್ಟೆ ಒದಗಿಸಿ ಸ್ಪರ್ಧಾತ್ಮಕ ದರ ನಿಗದಿ ಮಾಡಿದ್ದು, ತುಮುಲ್ ಒಕ್ಕೂಟವು ರೈತರ ಹಾಲಿಗೆ ಅತೀ ಹೆಚ್ಚು ಹಣ ನೀಡುತ್ತಿದ್ದು, 2ನೇ ಸ್ಥಾನದಲ್ಲಿದ್ದರೆ, ಬಮೂಲ್ 7ನೇ ಸ್ಥಾನದಲ್ಲಿದೆ. ತಿಂಗಳಿಗೆ 75 ಕೋಟಿ ರೈತರ ಖಾತೆಗೆ ಜಮೆಯಾಗುತ್ತಿದೆ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಈ ಹಿಂದೆ ಬಟವಾಡಿ ನೀಡಲೂ ಒಕ್ಕೂಟದಲ್ಲಿ ಹಣವಿರಲಿಲ್ಲ. ಆದರೆ ನಾನು ಅಧ್ಯಕ್ಷ ನಾದ ನಂತರ ತುಮುಲ್ ಚಿತ್ರಣವನ್ನು ಸಂಪೂರ್ಣ ಬದಲಾಯಿಸಿದ್ದು, ಈಗ ಪ್ರತಿ 7 ದಿನಕ್ಕೆ 20 ಕೋಟಿ ಹಣ ಬಟವಾಡೆ ನೀಡಲಾಗುತ್ತಿದ್ದು, ಪ್ರತಿ ತಿಂಗಳೂ 80 ಕೋಟಿ ವ್ಯವಹಾರ ನಡೆಯುತ್ತಿದೆ. ನನ್ನ ಅವಧಿಯಲ್ಲಿ ಬಾಂಬೆ ಮಹಾ ನಗರದಲ್ಲಿ ಮಾರುಕಟ್ಟೆ ಮಾಡಿದ್ದು, ಇಂದು 2 ಲಕ್ಷಕ್ಕೂ ಹೆಚ್ಚು ಹಾಲು ಸರಬರಾಜಾಗುತ್ತಿದೆ. ಇಂದು ಒಕ್ಕೂಟವು ಆರ್ಥಿಕವಾಗಿ ಸದೃಡವಾಗಿದ್ದು, ರೈತ ಕಲ್ಯಾಣ ಟ್ರಸ್ಟ್ ಆರಂಭಿಸಿ ರೈತರ, ಹಾಲು ಉತ್ಪಾದಕ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ತುಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಪಿ. ಸುರೇಶ್, ವ್ಯವಸ್ಥಾಪಕ ಡಾ.ಪ್ರಸಾದ್, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಡಾ. ಲಕ್ಷ್ಮೀನಾರಾಯಣ್, ಜಿಪಂ ಮಾಜಿ ಸದಸ್ಯ ಹೆಚ್.ಕೆಂಚಮಾರಯ್ಯ, ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ತುಮುಲ್ ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ಡಾ.ದೀಕ್ಷಿತ್, ಸಮಾಲೋಚಕರಾದ ಧರ್ಮವೀರ್, ದರ್ಶನ್, ಮಾರೇಗೌಡ, ವ್ಯವಸ್ಥಾಪಕ ರವಿಕಿರಣ್ ಇತರರಿದ್ದರು.
Comments are closed.