ತುಮಕೂರು: ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 25 ಸಾವಿರ ರೂ. ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟವಾಗುವುದನ್ನು ತಡೆಯಲು ನಾಫೆಡ್ ಮೂಲಕ ಖರೀದಿಸಲು ಮುಂದಾಗಬೇಕು ಹಾಗೂ ವಿದೇಶಗಳಿಂದ ಆಮದಾಗುತ್ತಿರುವ ಕೊಬ್ಬರಿಗೆ ಹೆಚ್ಚಿನ ಸುಂಕ ವಿಧಿಸಿ, ಕೊಬ್ಬರಿ ಬೆಳೆಗಾರರನ್ನು ರಕ್ಷಿಸುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಸರಕಾರವೇ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನ ಖರೀದಿಸುವುದು ಕಾನೂನಿನ ಪ್ರಕಾರ ತಪ್ಪು, ಆದರೆ ರಾಜ್ಯದಲ್ಲಿ ಸರಕಾರವೇ ನಿಗದಿಪಡಿಸಿದ ಬೆಂಬಲ ಬೆಲೆ 11,750 ಕ್ಕಿಂತ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಕೊಳ್ಳಲಾಗುತ್ತಿದೆ. ಇಂತಹ ವರ್ತಕರ ವಿರುದ್ಧ ಸರಕಾರ ಕ್ರಮ ಕೈಗೊಂಡು ರೈತರಿಗೆ ಒಳ್ಳೆಯ ಬೆಲೆ ಸಿಗುವತೆ ಮಾಡಬೇಕೆಂದು ಒತ್ತಾಯಿಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, 2015 ರಲ್ಲಿ ರೈತರು ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಹಮ್ಮಿಕೊಂಡ ಬೆಂಗಳೂರು ಚಲೋ ಪಾದಯಾತ್ರೆಗೆ ಬೆದರಿದ ಸರಕಾರ ತೋಟಗಾರಿಕಾ ಇಲಾಖೆ ಮಾಹಿತಿ ಪಡೆದು ಕ್ವಿಂಟಾಲ್ ಕೊಬ್ಬರಿಗೆ 11,750 ರೂ. ಬೆಲೆ ನಿಗದಿ ಮಾಡಿದ್ದರ ಪರಿಣಾಮ ಕೇಂದ್ರದ ಸಹಾಯ ಧನವೂ ಸೇರಿ ಕೊಬ್ಬರಿ ಬೆಳೆಗಾರರು ಅಂದು ಕ್ವಿಂಟಾಲ್ ಕೊಬ್ಬರಿಗೆ 16750 ರೂ. ಪಡೆಯುವಂತಾಯಿತು. ಆದರೆ ಪ್ರಸ್ತುತ ಕೊಬ್ಬರಿ ಬೆಲೆ ಬೆಂಬಲ ಬೆಲೆ ಕೆಳ ಮಟ್ಟಕ್ಕೆ ಕುಸಿದಿದೆ. ವಿಧಿಯಿಲ್ಲದೆ ಸಾಲ ಮಾಡಿ ಸುಸ್ತಾಗಿರುವ ರೈತ ಕಡಿಮೆ ಬೆಲೆಗೆ ನೀಡುತ್ತಿದ್ದಾನೆ. ಇದರಿಂದ ಕೊಬ್ಬರಿ ಅತ್ಯಂತ ನಷ್ಟ ಹೊಂದಿದೆ. ಹಾಗಾಗಿ ಕೊಬ್ವರಿಗೆ ಕನಿಷ್ಠ ಬೆಂಬಲ ಬೆಲೆ 25 ಸಾವಿರ ನೀಡಬೇಕು, ಅಲ್ಲಿಯವರೆಗೆ ನಾಫೆಡ್ ಮೂಲಕ ಕೊಬ್ಬರಿ ಖರೀದಿಸಿ ರೈತರ ಸಂಕಷ್ಟ ಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಮತ್ತು ಹೊರ ದೇಶಗಳಿಂದ ಯಥೇಚ್ಚವಾಗಿ ತೆಂಗಿನ ಉತ್ಪನ್ನ ಕಡಿಮೆ ಸುಂಕಕ್ಕೆ ಆಮದಾಗುತ್ತಿರುವ ಪರಿಣಾಮ ಕೊಬ್ಬರಿ ಬೆಲೆ ಕುಸಿದಿದೆ. ಹಾಗಾಗಿ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಪಡಿಸುವುರ ಜೊತೆಗೆ ಹೊರ ದೇಶಗಳಿಂದ ಬರುತ್ತಿರುವ ಕೊಬ್ಬರಿಗೆ ಹೆಚ್ಚಿನ ಆಮದು ಸುಂಕ ವಿಧಿಸಿ ಆಮದು ಪ್ರಮಾಣ ಗಣನೀಯವಾಗಿ ಕುಸಿಯುವಂತೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ರೈತರ ಪರವಾಗಿ ಧ್ವನಿ ಎತ್ತಬೇಕು. ಇಲ್ಲದಿದ್ದಲ್ಲಿ ಚುನಾವಣೆಯಲ್ಲಿ ಮತ ಕೇಳಲು ಬರುವ ನಿಮ್ಮನ್ನು ರೈತರು ಅಟ್ಟಾಡಿಸಿಕೊಂಡು ಹೊಡೆಯಲಿದ್ದಾರೆ ಎಂದು ಆನಂದ್ ಪಟೇಲ್ ಎಚ್ಚರಿಕೆ ನೀಡಿದರು.
ಈ ಸಂಬಂಧ ಮನವಿಯನ್ನು ತುಮಕೂರು ಉಪ ವಿಭಾಗಾಧಿಕಾರಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಗೌಡ, ಸಂಪಿಗೆ ಕೀರ್ತಿ, ಉಪಾಧ್ಯಕ್ಷರಾದ ಕುದುರೆಕುಂಟೆ ಲಕ್ಕಣ್ಣ, ಕಂದಿಕೆರೆ ನಾಗಣ್ಣ, ತಾಲೂಕು ಅಧ್ಯಕ್ಷ ಅನಿಲ್, ನಾಗೇಂದ್ರ, ಬಸ್ತಿಹಳ್ಳಿ ರಾಜಣ್ಣ, ಬಂಡಿಮನೆ ಲೋಕಣ್ಣ, ಸಿದ್ದರಾಜು, ಸಣ್ಣದ್ಯಾಮೇಗೌಡ, ಕುಣಿಗಲ್ ಕಾರ್ಯದರ್ಶಿ ವೆಂಕಟೇಶ್.ಹೆಚ್.ಎಸ್. ಇತರರು ಭಾಗವಹಿಸಿದ್ದರು.
Comments are closed.