ಸ್ಥಾಯಿ ಸಮಿತಿ ಅಧ್ಯಕ್ಷರ ರಾಜಿನಾಮೆಗೆ ಸದಸ್ಯರ ಆಗ್ರಹ

122

Get real time updates directly on you device, subscribe now.


ಶಿರಾ: ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಅಕ್ರಮವಾಗಿದೆ. ಅವರು ರಾಜೀನಾಮೆ ನೀಡಬೇಕು ಹಾಗೂ ಅವಾಚ್ಯ ಶಬ್ದಗಳಿಂದ ಸದಸ್ಯರನ್ನು ನಿಂದಿಸಿದ ಧ್ವನಿ ಮುದ್ರಣದ ಬಗ್ಗೆ ತನಿಖೆಯಾಗಬೇಕು ಎಂದು ನಗರಸಭಾ ಸದಸ್ಯ ಲಕ್ಷ್ಮಿಕಾಂತ್ ಹಾಗೂ ಪೂಜಾ ಮಾರ್ಚ್ 2 ನಂದು ಶಿರಾ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಬಿ.ಅಂಜನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಸ್ಥಾಯಿ ಸಮಿತಿಯ ಚುನಾವಣೆಯ ಎಲ್ಲಾ ಪ್ರಕ್ರಿಯೆಯನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗಿದ್ದು, ಪಾರದರ್ಶಕವಾಗಿ ಚುನಾವಣೆ ನಡೆದಿದೆ. ಒಂದು ವೇಳೆ ಅಕ್ರಮ ನಡೆದಿದೆ ಎಂದು ಸಾಬೀತಾದರೆ ರಾಜೀನಾಮೆ ಕೊಡಿಸುತ್ತೇನೆ ಎಂದು ಉತ್ತರ ಕೊಟ್ಟರು. ನೀವು ನೀಡಿರುವ ಅವಾಚ್ಯ ಶಬ್ದಗಳ ಧ್ವನಿ ಮುದ್ರಣ ತಿದ್ದುಪಡಿ ಆಗಿದ್ದು ತನಿಖೆಗೆ ಸಂಪೂರ್ಣ ಧ್ವನಿ ಮುದ್ರಣ ಅವಶ್ಯಕತೆ ಇದೆ. ನನ್ನ ಮೊಬೈಲ್ ಹ್ಯಾಕ್ ಮಾಡಿಲಾಗಿದ್ದು, ತನಿಖೆ ನಂತರ ತಿಳಿದು ಬರಲಿದೆ. ಅದಕ್ಕೆ ತಕ್ಕ ಶಿಕ್ಷೆ ಆಗಲಿದೆ ಎಂದು ಎಚ್ಚರಿಸಿದರು.

ಸಾಕಷ್ಟು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆಯಾಗಬೇಕಾಗಿದೆ. ಇಂತಹ ವಿಷಯಗಳನ್ನು ಅನಗತ್ಯವಾಗಿ ಸಭೆಯಲ್ಲಿ ತಂದು ಸಭೆಯ ಅಮೂಲ್ಯ ಸಮಯ ಹಾಳು ಮಾಡಬೇಡಿ ಎಂದು ತಿಳಿಸಿದರು.
ನಗರಾಧ್ಯಂತ ಪ್ಲಾಸ್ಟಿಕ್ ಬಳಕೆ, ನಾಯಿ, ಕೋತಿ ಹಾಗೂ ಬಿಡಾಡಿ ದನಗಳ ಕಾಟ ಜಾಸ್ತಿಯಾಗಿದ್ದು ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿದ್ದರೂ ಕೂಡ ಈವರೆಗೆ ಒಬ್ಬ ಅಧಿಕಾರಿಯೂ ಕಾರ್ಯ ಪ್ರವೃತ್ತರಾಗಿಲ್ಲ ಹಾಗೂ ಸಭೆಯಲ್ಲಿ ನಿರ್ಣಯವಾದ ಯಾವ ಕಾಮಗಾರಿಯನ್ನು ನೀವು ಮುಗಿಸಿದ್ದೀರಾ? ಅದಕ್ಕೆ ದಾಖಲೆ ಇದೆಯಾ? ನಗರಸಭೆ ಯಾವ ಅಧಿಕಾರಿಯೂ ಸದಸ್ಯರಿಗೆ ಸ್ಪಂದಿಸುತ್ತಿಲ್ಲ ಎಂದು ನಗರಸಭಾ ಸದಸ್ಯ ಅಜಯ್ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ನಾವು ಅಂಗಡಿಯಲ್ಲಿ ಮಾರಾಟ ಮಾಡುವ ಪ್ಲಾಸ್ಟಿಕ್ ಜಪ್ತಿ ಮಾಡಿದ್ದೇವೆ ಹಾಗೂ ದಂಡ ವಿಧಿಸಿದ್ದೇವೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಮಾರಾಟ ಮಾಡುವ ಸಗಟು ಮಾರಾಟಗಾರರಿಗೆ ಕಡಿಮೆ ದಂಡ 500 ರೂಪಾಯಿ ವಿಧಿಸುವುದರಿಂದ ಅವರು ಪ್ಲಾಸ್ಟಿಕ್ ಮಾರಾಟ ನಿಲ್ಲಿಸಿಲ್ಲ. ಸಾಮಾನ್ಯ ಸಭೆಯಲ್ಲಿ ಇದಕ್ಕೆ ತಿದ್ದುಪಡಿ ತಂದು ಹೆಚ್ಚು ದಂಡ ವಿಧಿಸಿ ಮಾರಾಟ ನಿಲ್ಲಿಸಲು ಕ್ರಮ ತೆಗೆದುಕೊಳ್ಳಿ ಎಂದು ಅಜಯ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಅಂಬುಜಾಕ್ಷಿ ನಟರಾಜ್ , ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್. ಎಲ್.ರಂಗನಾಥ್, ನಗರಸಭಾ ಪ್ರಭಾರ ಆಯುಕ್ತೆ ಪಲ್ಲವಿ, ವ್ಯವಸ್ಥಾಪಕಿ ಗೀತಾ, ಕಂದಾಯ ನಿರೀಕ್ಷಕ ವಿಶ್ವೇಶ್ವರ, ನಗರಸಭಾ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!