100ಕ್ಕೆ ನೂರು ಬಿಜೆಪಿ ಟಿಕೆಟ್ ನಂಗೆ ಸಿಗುತ್ತೆ: ಡಿಕೆ

117

Get real time updates directly on you device, subscribe now.


ಕುಣಿಗಲ್: ನೂರಕ್ಕೆ ಇನ್ನೂರು ಪರ್ಸೆಂಟ್ ಈಬಾರಿ ಕುಣಿಗಲ್ ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್ ನನಗೆ ಎಂದು ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಬಿಜೆಪಿಯಲ್ಲಿ ಯಾವುದೆ ಗೊಂದಲ ಇಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವೂ ಹೆಚ್ಚಿನ ಗೊಂದಲದ ಸೃಷ್ಟಿಸುತ್ತಿದೆ. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡರು ಟಿಕೆಟ್ ಆಕಾಂಕ್ಷಿಯೆ ಅಲ್ಲ. ಕಾರಣ ಅವರು ಇತ್ತೀಚೆಗೆ ಪಕ್ಷ ಸೇರಿದ್ದು ಅವರಿಗೆ ಬೇಕಾದವರು ಕೇಳಿದಾಗ ತಾವೂ ಆಕಾಂಕ್ಷಿ ಎನ್ನುತ್ತಾರೆ. ಆದರೆ ಪಕ್ಷದ ಕೋರ್ ಕಮಿಟಿ ಸೇರಿದಂತೆ ಯಾವುದೇ ಹಂತದಲ್ಲೂ ಯಾರ ಹೆಸರು ಸಹ ಪ್ರಸ್ತಾಪವಾಗಿಲ್ಲ. ಅವರು ಏನಿದ್ದರೂ ಮುಂದಿನ ಲೋಕಸಭೆಯ ಚುನಾವಣೆ ಅಭ್ಯರ್ಥಿಯಾಗುವತ್ತ ಗಮನ ಹರಿಸುತ್ತಿದ್ದಾರೆ. ಇನ್ನೊಬ್ಬ ಬಿಜೆಪಿ ಮುಖಂಡರೆಂದು ಹೇಳಿಕೊಳ್ಳುವ ರಾಜೇಶ್ ಗೌಡರಿಗೆ ಪಕ್ಷ ಯಾವುದೇ ಜವಾಬ್ದಾರಿ ಆಗಲಿ, ಸ್ಥಾನವಾಗಲಿ ನೀಡಿಲ್ಲ. ಟಿಕೆಟ್ ನನ್ನದೆ ಎಂದು ಓಡಾಡುತ್ತಿರುವುದರಲ್ಲಿ ಅರ್ಥ ಇಲ್ಲ.

ಪ್ರಸಕ್ತ ಚುನಾವಣೆ ಪೂರ್ವದ ಪಕ್ಷದ ಸಿದ್ಧತೆ ಮಾಡಲು ಪಕ್ಷದ ವರಿಷ್ಠರು ತಮಗೆ ಹೇಳುತ್ತಿದ್ದಾರೆ. ನಮ್ಮ ನೇತೃತ್ವದಲ್ಲೆ ಪಕ್ಷ ಸಂಘಟಿಸುವ ಕೆಲಸ ನಡೆಯುತ್ತಿರುವಾಗ ವಿರೋಧ ಪಕ್ಷಗಳು ಟಿಕೆಟ್ ಇಲ್ಲ ಎಂಬ ವದಂತಿ ಹಬ್ಬಿಸಿರುವುದು ಸರಿಯಲ್ಲ. ಪಕ್ಷದ ರಾಜ್ಯಾಧ್ಯಕ್ಷರು, ವರಿಷ್ಠರಾದ ಸಂತೋಷ್ ಜಿ ಇತರರು ತಮಗೆ ಭರವಸೆ ನೀಡಿ ಪಕ್ಷ ಸಂಘಟನೆಯ ಕೆಲಸ ವಹಿಸಿದ್ದಾರೆ. ಅದರಂತೆ ತಾವು ಈಗಾಗಲೆ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದೇನೆ. ರಾಜ್ಯಮಟ್ಟದ ರೈತ ಮೋರ್ಚಾ ಸಭೆ ಸೇರಿದಂತೆ ಇನ್ನು ಮೂರು ಸಭೆಗಳ ಆಯೋಜನೆಗೆ ತಮಗೆ ಹೇಳಿದ್ದಾರೆ. ಮೂರು ಬಾರಿ ಸೋತಿದ್ದೇನೆ.

ಈ ಬಾರಿ ಟಿಕೆಟ್ ನೀಡುವುದಿಲ್ಲ ಎನ್ನುವುದು ಜೆಡಿಎಸ್ ಪಕ್ಷದವರು ಸೃಷ್ಟಿಸಿರುವ ವದಂತಿ, ಜೆಡಿಎಸ್ ಕಾರ್ಯಕರ್ತರೆ ನಮ್ಮ ಬಳಿ ಬಂದು ಆ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಾಮಾನದಿಂದ ಬೇಸತ್ತು ಬಿಜೆಪಿ ಅಭ್ಯರ್ಥಿಯಾದ ನನ್ನನ್ನೆ ಬೆಂಬಲಿಸುವುದಾಗಿ ತಂಡ, ತಂಡವಾಗಿ ಬಂದು ಹೇಳುತ್ತಿದ್ದಾರೆ. 2023ರ ವಿಧಾನಸಭೆ ಬಿಜೆಪಿ ಟಿಕೆಟ್ ನನಗೆ ಸಿಗುವ ಪೂರ್ಣ ನಂಬಿಕೆ ಇರುವಾಗ ಪಕ್ಷೇತರವಾಗಿ ನಿಲ್ಲುವ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಕ್ಷೇತ್ರದ ಮತದಾರರು ಈ ಬಾರಿ ತಮ್ಮನ್ನು ಆಯ್ಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದರು.

Get real time updates directly on you device, subscribe now.

Comments are closed.

error: Content is protected !!